Saturday, 2 June 2018

ಕನ್ನಡ ನಾಡಿನ ವೀರರಮಣಿಯ

ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರನಾರಿಯ
ಚರಿತೆಯ ನಾನು ಹಾಡುವೆ ।। ಪಲ್ಲವಿ ।।
ಚಿತ್ರದುರ್ಗದಾ ಕಲ್ಲಿನ ಕೋಟೆ
ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ
ಮದಕರಿನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ಧರು ಹರಿಸಿದ ಸಿರಿನಾಡು ।। ೧ ।।
ವೀರ ಮದಕರಿ ಆಳುತಲಿರಲು
ಹೈದರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು
ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ ದಾರಿಗಾಣದೇ ಮಂಕಾದ ।। ೨ ।।
ಗೂಢಚಾರರು ಅಲೆದು ಬಂದರು
ಹೈದರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು ।। ೩ ।।
ಸುತ್ತಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕೆ ನಡೆದಿರಲು
ಸಿಹಿನೀರು ತರಲೆಂದು ಅವನ ಸತಿ ಬಂದಿರಲು
ಕಳ್ಳಗಂಡಿಯ ಹಿಂದೆ ಪಿಸ್ಸುಮಾತು ಕೇಳಿದಳು, ಆಲಿಸಿದಳು, ಇಣುಕಿದಳು
ವೈರಿ ಪಡೆ ಕೊಟ್ಟೆಯುತ್ತ ಬರುವುದನು ಕಂಡಳು ।। ೪ ।।
ಕೈಗೆ ಸಿಕ್ಕಿದಾ ಒನಕೆ ಹಿಡಿದಳು
ವೀರಗಚ್ಚೆಯ ಹಾಕಿ ನಿಂದಳು
ದುರ್ಗಿಯನ್ನು ಮನದಲ್ಲೆ ನೆನೆದಳು
ಕಾಳಿಯಂತೆ ಬಲಿಗಾಗಿ ಕಾದಳು ಯಾರವಳು? ಯಾರವಳು?
ವೀರವನಿತೆ ಆ ಓಬವ್ವ.. ದುರ್ಗವು ಮರೆಯದ ಓಬವ್ವ ।। ೫ ।।
ತೆವಳುತ ಒಳಗೆ ಬರುತಿರೆ ವೈರಿ
ಒನಕೆ ಬೀಸಿ ಕೊಂದಳು ನಾರಿ
ಸತ್ತವನನ್ನು ಎಳೆದು ಹಾಕುತ
ಮತ್ತೆ ನಿಂತಳು ಹಲ್ಲು ಮಸೆಯುತ
ವೈರಿ ರುಂಡ ಚೆಂಡಾಡಿದಳು ರಕುತದ ಕೋಡೀ ಹರಿಸಿದಳು ।। ೬ ।।
ಸತಿಯ ಹುಡುಕುತ ಕಾವಲಿನವನು
ಗುಪ್ತದ್ವಾರದ ಒಳಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು
ಹೆಣದ ರಾಶಿಯ ಬಳಿಯೇ ಕಂಡನು
ರಣಚಂಡಿ ಅವತಾರವನು ಕೋಟಿ ಸಲಹಿದ ತಾಯಿಯನು ।। ೭ ।।
ರಣ ಕಹಳೆಯನು ಊದುತಲಿರಲು
ಸಾಗರದಂತೆ ಸೈನ್ಯ ನುಗ್ಗಲು
ವೈರಿ ಪಡೆಯು ನಿಶ್ಯೇಷವಾಗಲು
ಕಾಳಗದಲ್ಲಿ ಜಯವನು ತರಲು
ಅಮರಳಾದಳು ಓಬವ್ವ ಚಿತ್ರದುರ್ಗದ ಓಬವ್ವ ।। ೮ ।।
ಚಿತ್ರ: ನಾಗರಹಾವು (೧೯೭೨)
ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ಚಿ. ಉದಯಶಂಕರ್
ಹಾಡಿದವರು: ಪಿ.ಬಿ. ಶ್ರೀನಿವಾಸ್⁠