Saturday, 2 June 2018

ಏರೋಪ್ಲೇನ್ ಚಿಟ್ಟೆ

ಹೆಲಿಕಾಪ್ಟರ್ ಹೋಲುವ ಚಿಟ್ಟೆ. ಈ ಡ್ರಾಗನ್ ಫ್ಲೈ 'ಏರೋಪ್ಲೇನ್ ಚಿಟ್ಟೆ' ಅಂತಲೇ ಖ್ಯಾತಿ. ಹಳ್ಳಿಗಳಲ್ಲಿ 'ಪೀಟಿ' ಅಂತಲೇ ಪರಿಚಿತ. ಸಣ್ಣ ಗಾತ್ರದ ಈ ಕೀಟಕ್ಕೆ ಕೀಟಳೆ ಮಾಡುವವರೇ ಹೆಚ್ಚು. ಹೆಲಿಕಾಪ್ಟರ್ ಚಕ್ರದಂತೆ ಕಾಣುವ ಎರಡು ಜೋಡಿ ಸೂಕ್ಷ್ಮ ರೆಕ್ಕೆಗಳನ್ನು ಹೊಂದಿದೆ. ರಕ್ಕೆಗಳು ಪಾರದರ್ಶಕವಾಗಿದ್ದು ಆಕರ್ಷಿತವಾಗಿವೆ. ಮುಖದ ಆಕಾರ ನೋಡಲು ಬಹಳ ಮಜವಾಗಿದೆ. ದಪ್ಪನೆಯ ಕಣ್ಣುಗಳು ಬೈಕಿನ ಹೆಡ್‌ಲೈಟ್‌ನಂತೆ ಕಾಣುತ್ತವೆ. ಇದೊಂದು ಪ್ರಕೃತಿದತ್ತ ಕೀಟವಾದರೂ ಯಾಂತ್ರಿಕತೆಯನ್ನು ಹೋಲುವಂತಿದೆ. ಮನುಷ್ಯನೇ ತಯಾರಿಸಿದ ರೋಬೋ ತರ ಪ್ರಕೃತಿಗೆ ಉಪಕಾರಿಯಾಗಿ ಜೀವಿಸುತ್ತದೆ. ತುಂಟ ಮಕ್ಕಳಿಗೆ ಆಟಿಕೆಯಂತಾಗಿರುವುದು ವಿಪರ್ಯಾಸ.

ಹುಳದ ಹಿಂಬದಿ ಉದ್ದವಿದ್ದು, ಅದಕ್ಕೆ ಗೊತ್ತಾಗದಂತೆ ಹಿಡಿಯುವ ಚತುರತೆ ಮಕ್ಕಳಿಗಿದೆ. ಬಾಲಕ್ಕೆ ದಾರ ಕಟ್ಟಿ ಹಾರಲುಬಿಟ್ಟು ಮಜಾ ತೆಗೆದುಕೊಳ್ಳುವ ತಿಳಿಗೇಡಿ ಮಕ್ಕಳೂ ಇದ್ದಾರೆ. ಅದಕ್ಕೂ ನೋವು, ಹಿಂಸೆ ಆಗುತ್ತದೆ ಎಂಬುದನ್ನು ತಿಳಿಯಪಡಿಸಬೇಕಾದ ಜವಾಬ್ದಾರಿ ಪೋಷಕರಿಗಿದ್ದೂ ಇಲ್ಲದಂತಾಗಿದೆ.

ಇವು ಬತ್ತದ ಗದ್ದೆಗಳಲ್ಲಿ ಹೆಚ್ಚು ಕಾಣಸಿಗುತ್ತವೆ. ಇವುಗಳು ಬಾರದಿದ್ದರೆ ಬತ್ತ ಜೊಳ್ಳು ಬೀಳುತ್ತದೆ ಎಂಬ ನಂಬಿಕೆಯೂ ಹಲವು ಕಡೆಗಳಲ್ಲಿವೆ. ಬತ್ತಕ್ಕೆ ಹಾಲು ತುಂಬುವ ಕೆಲಸವನ್ನು ಮಾಡುತ್ತವೆ ಎಂಬ ಉತ್ಪ್ರೇಕ್ಷೆಯ ಮಾತುಗಳೂ ಕೇಳಿಬರುತ್ತವೆ. ಡ್ರಾಗನ್ ಫ್ಲೈಸ್ ಎಲ್ಲ ಕೀಟಗಳಂತೆ ಆರು ಕಾಲುಗಳನ್ನು ಹೊಂದಿವೆ. ಗಮನಿಸಿದಂತೆ ಹಾರುವುದನ್ನು ಬಿಟ್ಟು ಹೆಚ್ಚು ಸಮಯ ಕುಳಿತೇ ಕಾಲ ಕಳೆಯುತ್ತದೆ. ಕಾರಣ ಅದಕ್ಕೆ ಅಷ್ಟಾಗಿ ನಡೆಯಲು ಆಗದು. ಆದರೇನಂತೆ ಇವುಗಳು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಹಾರುವ ಕೆಲವೇ ಕೀಟಗಳಲ್ಲಿ ಒಂದು.

ಆಹಾರವೇನು?

ಇವುಗಳಿಗೆ ಸೊಳ್ಳೆಗಳೇ ಪ್ರಧಾನ ಆಹಾರ. ಇತರೆ ಸಣ್ಣ ಕೀಟಗಳಾದ ನೊಣ, ಜೇನ್ನೊಣ, ಇರುವೆಗಳು ಏರೋಪ್ಲೇನ್ ಚಿಟ್ಟೆಯ ಆಹಾರ. ಹೆಚ್ಚಿನದಾಗಿ ಇವುಗಳು ಕೆರೆ, ಕೊಳ, ನದಿ, ಇಂಥ ತಂಪಿನ ವಾತಾವರಣದಲ್ಲಿ ಕಾಣಸಿಗುತ್ತವೆ. ವಾತಾವರಣದಲ್ಲಿ ಹೆಚ್ಚು ತೇವಾಂಶವಿದ್ದರೆ ಸಖ್ಯ. ಜಗತ್ತಿನಲ್ಲಿ ಸುಮಾರು 5680 ಜಾತಿಯ ಡ್ರಾಗನ್ ಫ್ಲೈಸ್ ಇವೆಯಂತೆ. ವಯಸ್ಸಾಗಿ ಸಾಯುವುದಕ್ಕಿಂತ ಶತ್ರುಗಳ ಹೊಟ್ಟೆ ಸೇರುವ ದುಂಬಿಗಳೇ ಹೆಚ್ಚು. ಅಂದಹಾಗೆ ಪಕ್ಷಿಗಳು, ಹಲ್ಲಿ, ಕಪ್ಪೆ, ಜೇಡಗಳು ಏರೋಪ್ಲೇನ್ ಚಿಟ್ಟೆಯ ಪರಮಶತ್ರುಗಳು.
ನಾಗರಿಕತೆಯ ಹೊಡೆತಕ್ಕೆ ಈ ಏರೋಪ್ಲೇನ್ ಚಿಟ್ಟೆಗಳು ಕಂಗೆಟ್ಟಿವೆ. ಒಟ್ಟಾಗಿ ಹಾರುವ ಪ್ರವೃತ್ತಿ ದುಂಬಿಗಳಿಗಿಲ್ಲದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದ ಕಾರಣ ಹಿಂಡು ಹಿಂಡಾಗಿ ಕಾಣಿಸುತ್ತಿದ್ದವು. ಕಾಲ ಬದಲಾದಂತೆ ಕ್ರಮೇಣ ಏರೋಪ್ಲೇನ್ ಚಿಟ್ಟೆಗಳ ಹಿಂಡು ಕ್ಷೀಣಿಸುತ್ತಾ ಬಂತು. ನೀರಿರುವ ಪ್ರದೇಶಗಳಲ್ಲಿ ಈಗ ಅಲ್ಲೊಂದು ಇಲ್ಲೊಂದು ಬಿಟ್ಟರೆ ಬೇರೆ ಕಾಣಿಸುತ್ತಿಲ್ಲ. ಗೊತ್ತಿಲ್ಲದಂತೆ ಡ್ರಾಗನ್ ಫ್ಲೈಸ್ ಅಳಿವಿನಂಚಿಗೆ ಸಿಲುಕಿವೆ.
ಬಣ್ಣ ಮತ್ತು ಆಕಾರಗಳಲ್ಲಿ ಬಹು ಆಕರ್ಷಣೆಯಿಂದ ಕೂಡಿದ್ದು, ಇದರ ಅಂದವೇ ರೋಮಾಂಚನ. ಮೃದು, ಉಪಕಾರಿ, ಸೌಂದರ್ಯ, ಅಚ್ಚರಿಗಳಿಂದ ತುಂಬಿರುವ ಏರೋಪ್ಲೇನ್ ಚಿಟ್ಟೆಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕೆಂದಿದ್ದರೆ ಈಗಿಂದೀಗಲೆ ಇದರ ರಕ್ಷಣೆಯ ಕುರಿತು ಆಲೋಚನೆಗಳು ಸಾಗಬೇಕು.

ಮೊಟ್ಟೆಗೆ ಕಷ್ಟ
ಕೃಷಿಯಲ್ಲಿ ಕೀಟನಾಶಕ ಬಳಕೆ, ಪರಿಸರದ ನಾಶ, ಡ್ಯಾಮ್ ನಿರ್ಮಾಣ ಇತ್ಯಾದಿ ಕಾರಣಗಳಿಂದಾಗಿ ಏರೋಪ್ಲೇನ್ ಚಿಟ್ಟೆಗಳಿಗೆ ಮೊಟ್ಟೆಯನ್ನಿಡಲು ಸೂಕ್ತ ಸ್ಥಳ ಸಿಗುತ್ತಿಲ್ಲ. ತೇವಾಂಶವಿರುವ ಕಡೆಗಳಲ್ಲಿ ಬೆಳೆಯುವ ಗಿಡಗಳ ಎಲೆ ಅಥವಾ ಕಾಂಡಗಳಲ್ಲಿ ಮೊಟ್ಟೆಯಿಡುತ್ತವೆ. ಬತ್ತದ ಕೃಷಿ ಭೂಮಿಯಲ್ಲಿ ಈಗ ಕೀಟನಾಶಕ ಸಿಂಪಡನೆಯಿಂದಾಗಿ ಮೊಟ್ಟೆಗಳು ನಾಶ ಹೊಂದತೊಡಗಿವೆ. ಡ್ಯಾಮ್, ಕಾಲುವೆಗಳ ನಿರ್ಮಾಣದಿಂದ ಮೊಟ್ಟೆಗಳು ನೀರುಪಾಲಾಗುತ್ತವೆ ಮತ್ತು ಸುತ್ತಲಿನ ಭೂಪ್ರದೇಶ ಮುಳುಗುವುದರಿಂದ ಮೊಟ್ಟೆಯನ್ನಿರಿಸಲು ಸೂಕ್ತ ಗಿಡಗಳೇ ಸಿಗುವುದಿಲ್ಲ.