ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ
ಜನನ ಆಗಸ್ಟ್ ೧೫, ೧೭೯೮
ಜನ್ಮ ಸ್ಥಳ ಸಂಗೊಳ್ಳಿ, ಕಿತ್ತೂರು ಸಾಮ್ರಾಜ್ಯ (ಇಂದಿನ ಬೆಳಗಾವಿ, ಕರ್ನಾಟಕ, ಭಾರತ)
ಮರಣ ಜನವರಿ ೨೬, ೧೮೩೧
ಮರಣ ಸ್ಥಳ ನಂದಗಡ (ಇಂದಿನ ಕರ್ನಾಟಕ, ಭಾರತ)
ಪರಿಚಯ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು. ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು. ಬ್ರಿಟಿಷರು ಚನ್ನಮ್ಮನನ್ನು ಬೈಲಹೊಂಗಲದಲ್ಲಿ ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು. ಜನವರಿ ೨೬ ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ ಆಗಸ್ಟ್ ೧೫ ೧೭೯೮ , ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ ಜನವರಿ ೨೬, ಭಾರತವು ಗಣರಾಜ್ಯವೆಂದು ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, "ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರೆಸುವದಾಗಿದೆ ಹಾಗೂ ಬ್ರಿಟೀಷರನ್ನು ಹೊಡೆದೋಡಿಸಲು ಮನೆಗೊಬ್ಬ ರಾಯಣ್ಣ ಹುಟ್ಟಲಿ" ಎಂದು ಹೇಳಿದ್ದಾನೆ.
ಹಿನ್ನೆಲೆ.
ರಾಯಣ್ಣನಿಗೆ, ರಾಯ ನಾಯಕ, ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದಾಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ರಾಯಣ್ಣನಿಗೆ ಹೆಸರಿಸಲ್ಪಟ್ಟಿವೆ.
ಕಿತ್ತೂರಿನಿಂದ ಕೆಲವೇ ದೂರದಲ್ಲಿರುವ ಸಂಗೊಳ್ಳಿ ಗ್ರಾಮದಲ್ಲಿ ಭರಮಪ್ಪ ಮತ್ತು ಕೆಂಚವ್ವ ದಂಪತಿಯ ಎರಡನೆ ಪುತ್ರನಾಗಿ ರಾಯಣ್ಣ ಜನಿಸುತ್ತಾನೆ. ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರಾಘಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ಇತ್ತು.
ಇವರ ಮುತ್ತಜ್ಜ ಆಯುರ್ವೇದ ಪಂಡಿತರಾಗಿದ್ದರು. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿ. ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಹಿಡಿದು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಆರಸರು ನೀಡಿದ ಹೊಲವೇ ರಕ್ತಮಾನ್ಯದ ಹೊಲ. ಸಂಗೊಳ್ಳಿಯಲ್ಲಿನ ಗರಡಿ ಮನೆ ಅತ್ಯಂತ ಪ್ರಸಿದ್ಧಿಯಿರುವ ಗರಡಿ. ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್‌೧೫ನೆಯ ದಿನ ೧೭೯೬, ಆಗಸ್ಟ ಹದಿನೈದು ಭಾರತೀಯರಿಗೆ ರಾಷ್ಟ್ರೀಯ ದೊರಕಿದ ದಿನವಾಗಿದೆ. ಭಾರತೀಯರಿಗೆ ರಾಷ್ಟ್ರೀಯ ಹಬ್ಬ.
ರಾಯಣ್ಣನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನ ಜಾನೇವರಿ ೨೬ನೆಯ ದಿನ ೧೮೩೧; ಜಾನೇವರಿ ಇಪ್ಪತ್ತಾರು ಭಾರತೀಯರಿಗೆ ಸಂಪೂರ್ಣ ಸ್ವಾತಂತ್ಯ್ರದಿನ, ಪ್ರಜಾಸತ್ತಾತ್ಮಕ ದಿನ, ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇವೆರಡು ದಿನಗಳು ಜನನ ಮರಣದವುಗಳು ರಾಯಣ್ಣನಿಗೆ ಮಾತ್ರವಲ್ಲ, ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿವೆ. ಇಡೀ ಜೀವಮಾನ ಆಂಗ್ಲರನ್ನು ನಾಡಿನಿಂದ-ದೇಶದಿಂದ ಹೊರಹಾಕಲು ಮಾಡಿದ ಹೋರಾಟ (ಲಡಾಯಿ)ಗಳು ಸ್ಮರಣೀಯವಾಗಿವೆ.
ಮೂವತ್ತೈದು ವರುಷ ಜನ್ಮದಾರಭ್ಯದಿಂದ ಸ್ವರ್ಗವಾಸಿಯಾಗುವವರೆಗೆ ತನ್ನ ಸರ್ವಸ್ವವನ್ನು ಕಿತ್ತೂರ ನಾಡಿನ ಸ್ವಾತಂತ್ಯ್ರಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ. ಬ್ರಿಟೀಷರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಮರಣದಂಡನೆ ನೀಡಿದರು. ಆತನ ಜೊತೆ ಇತರ ಏಳು ಜನ ಅನುಯಾಯಿಗಳು ವಿಚಾರಣೆ ನಡೆಸಿ ಮರಣ ದಂಡನೆ ನೀಡಿದರು. ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು. ಅವರ ವಿವರ ಕೆಳಗಿನಂತಿದೆ.
ಮರಣ ದಂಡನೆ ಶಿಕ್ಷೆಗೊಳಪಟ್ಟವರು.
೧. ರಾಯಣ್ಣ ೩೫
೨. ಬಾಳಾ ನಾಯಕ ೫೦
೩. ಬಸಲಿಂಗಪ್ಪ ೩೦
೪. ಕರಬಸಪ್ಪ ೪೦
೫. ಭೀಮಾ ಜಿಡ್ಡಿಮನಿ ೪೦
೬. ಕೆಂಚಪ್ಪ ೩೦
೭. ಅಪೂಜಿ ನಾಯಕ ೩೦
ಜೀವಾವಧಿ ಶಿಕ್ಷೆಗೊಳಪಟ್ಟು ಸಮುದ್ರದಾಚೆಗೆ ಕಳಿಸಲ್ಪಟ್ಟವರು.
೧.ರುದ್ರನಾಯಕ ೫೦
೨. ಎಲ್ಲಾನಾಯಕ ೪೦
೩. ಅಪ್ಪೂಜಿ ೪೦
೪. ರಾಣಮೋಜಿಕೊಂಡ ೩೦
೫. ಕೋನೇರಿ ೪೦
೬. ನೇಮಣ್ಣ ೪೦
ಮರಣದ ನಂತರ.
ಕತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಇವನ ಸಮಾಧಿಯ ಮೇಲೆ ಆಲದ ಮರವೊಂದನ್ನು ನೆಟ್ಟ. ಅಂದು ನೆಟ್ಟ ಆಲದ ಮರ ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯ ಸ್ಥಳವಾಗಿದೆ. ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಇದ್ದರೆ ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ. ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಕ್ಕಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು.
ಚಲನಚಿತ್ರ.
ರಾಯಣ್ಣನ ಬದುಕನ್ನು ಆಧರಿಸಿ ೧೯೬೭ರಲ್ಲಿ ಒಂದು ಚಿತ್ರ ನಿರ್ಮಾಣವಾಯ್ತು. ಮತ್ತೆ ೨೦೧೨ರಲ್ಲಿ ಸಂಗೊಳ್ಳಿ ರಾಯಣ್ಣ ಎಂಬ ಹೆಸರಿನಲ್ಲಿಯೇ ಮತ್ತೊಂದು ಅದ್ದೂರಿ ಚಿತ್ರವೂ ನಿರ್ಮಾಣವಾಯ್ತು. ಇದನ್ನು ನಿರ್ಮಿಸಿದವರು ಆನಂದ ಅಪ್ಪುಗೋಳ ಮತ್ತು ಇದನ್ನು ನಿರ್ದೇಶಿಸಿದವರು ನಾಗಣ್ಣ. ಈ ಚಿತ್ರದ ನಾಯಕರಾಗಿ ದರ್ಶನ್ ತೂಗುದೀಪ್ ಅಭಿನಯಿಸಿದ್ದಾರೆ.ತಾಯಿಯ ಪಾತ್ರದಲ್ಲಿ [ಶ್ರೀಮತಿ ಉಮಾಶ್ರೀಯವರು] ಮತ್ತು ಕಿತ್ತೂರು ಚೆನ್ನಮ್ಮನಾಗಿ ಜಯಪ್ರದಾ ಕೂಡಾ ಅಭಿನಯಿಸಿದ್ದಾರೆ.
