'ಬ್ಲಾಕ್ ಬಾಕ್ಸ್' ಸಿಗ್ನಲ್ ನ್ನು ಹೇಗೆ ಕಳಿಸುತ್ತದೆ?
ವಿಮಾನದ ಕಪ್ಪು ಪೆಟ್ಟಿಗೆ (Black Box) ವಾಸ್ತವವಾಗಿ ಕಪ್ಪಾಗಿರುವುದಿಲ್ಲ ಮತ್ತು ಅದು ಸಮುದ್ರದ ಆಳದಲ್ಲಿ ಬಿದ್ದರೂ ಹೇಗೆ ಸಿಗ್ನಲ್ ಕಳುಹಿಸುತ್ತದೆ? ವಿಮಾನ ಅಪಘಾತವಾದಾಗ ಇಡೀ ಜಗತ್ತು ಹುಡುಕುವುದು ಒಂದೇ ವಸ್ತುವನ್ನು, ಅದೇ 'ಬ್ಲಾಕ್ ಬಾಕ್ಸ್'. ದುರಂತಕ್ಕೆ ಕಾರಣವೇನು? ಪೈಲಟ್ ತಪ್ಪು ಮಾಡಿದ್ದೇ? ಅಥವಾ ತಾಂತ್ರಿಕ ದೋಷವೇ? ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲ ಏಕೈಕ ಸಾಕ್ಷಿ ಇದು.
ಆದರೆ, ಈ ಪೆಟ್ಟಿಗೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಅದು ಕೆಲಸ ಮಾಡುವ ರೀತಿ ನಿಜಕ್ಕೂ ಸೋಜಿಗ. ಮೊದಲ ರಹಸ್ಯ ಇದು 'ಕಪ್ಪು' ಅಲ್ಲ ಮತ್ತು 'ಬಾಕ್ಸ್' ಮಾತ್ರವಲ್ಲ! ಹೆಸರು 'ಬ್ಲಾಕ್ ಬಾಕ್ಸ್' ಎಂದಿದ್ದರೂ, ವಾಸ್ತವದಲ್ಲಿ ಇದರ ಬಣ್ಣ ಗಾಢ ಕಿತ್ತಳೆ. ಏಕೆ ಈ ಬಣ್ಣ? ವಿಮಾನ ಬಿದ್ದಾಗ ಅವಶೇಷಗಳ ರಾಶಿ, ಕಾಡಿನ ಗಿಡಗಂಟಿಗಳು ಅಥವಾ ಸಮುದ್ರದ ಆಳದಲ್ಲಿ ಇದನ್ನು ಸುಲಭವಾಗಿ ಗುರುತಿಸಲು ಈ ಹೊಳೆಯುವ ಕಿತ್ತಳೆ ಬಣ್ಣವನ್ನು ಬಳಸಲಾಗುತ್ತದೆ. ಇದರ ಮೇಲೆ 'ಪ್ರತಿಫಲಿಸುವ ಪಟ್ಟಿಗಳು' (Reflective Strips) ಕೂಡ ಇರುತ್ತವೆ.
ಯಾರಾದರೂ ಟಾರ್ಚ್ ಬೆಳಕು ಹಾಯಿಸಿದರೆ ಇದು ದೂರದಿಂದಲೇ ಮಿನುಗುತ್ತದೆ. ಇದರಲ್ಲಿ ಎರಡು ಪ್ರತ್ಯೇಕ ಭಾಗಗಳಿರುತ್ತವೆ. ಮೊದಲನೆಯದು FDR (Flight Data Recorder). ಇದು ವಿಮಾನದ ಆರೋಗ್ಯದ ದಾಖಲೆ. ವಿಮಾನದ ವೇಗ, ಎತ್ತರ, ಇಂಜಿನ್ ಸ್ಥಿತಿ, ರೆಕ್ಕೆಗಳ ಚಲನೆ ಸೇರಿದಂತೆ ಸುಮಾರು 88ಕ್ಕೂ ಹೆಚ್ಚು ಬಗೆಯ ದತ್ತಾಂಶಗಳನ್ನು (Data) ಇದು ಪ್ರತಿ ಸೆಕೆಂಡಿಗೆ ದಾಖಲಿಸುತ್ತಿರುತ್ತದೆ. ಎರಡನೆಯದು, CVR (Cockpit Voice Recorder). ಇದು ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ಸಂಭಾಷಣೆ, ಎಚ್ಚರಿಕೆಯ ಶಬ್ದಗಳು (Alarms), ಸ್ವಿಚ್‌ಗಳ ಶಬ್ದ ಮತ್ತು ಹಿನ್ನೆಲೆಯಲ್ಲಿ ಇಂಜಿನ್ ಶಬ್ದವನ್ನು ರೆಕಾರ್ಡ್ ಮಾಡುತ್ತದೆ.
ವಿಮಾನವು ಸಾಗರದಲ್ಲಿ ಬಿದ್ದಾಗ, ಅದು ಕಿಮೀಗಟ್ಟಲೆ ಆಳಕ್ಕೆ ಹೋಗಬಹುದು. ಅಲ್ಲಿ ಜಿಪಿಎಸ್ (GPS) ಕೆಲಸ ಮಾಡುವುದಿಲ್ಲ, ರೇಡಿಯೋ ತರಂಗಗಳು ಚಲಿಸುವುದಿಲ್ಲ. ಆದರೂ ರಕ್ಷಣಾ ತಂಡಗಳು ಬ್ಲಾಕ್ ಬಾಕ್ಸ್ ಅನ್ನು ಪತ್ತೆಹಚ್ಚುತ್ತವೆ. ಇದಕ್ಕೆ ಕಾರಣ ಅದರ ಜತೆಯಲ್ಲಿರುವ ಒಂದು ಪುಟ್ಟ ಸಿಲಿಂಡರ್ ಆಕಾರದ ಸಾಧನ - "ಅಂಡರ್ ವಾಟರ್ ಲೊಕೇಟರ್ ಬೀಕನ್" (Underwater Locator Beacon - ULB). ಇದನ್ನೇ ಆಡುಮಾತಿನಲ್ಲಿ ಪಿಂಗರ್ (Pinger) ಎಂದು ಕರೆಯುತ್ತಾರೆ.
ಇದು ಹೇಗೆ ಕೆಲಸ ಮಾಡುತ್ತದೆ?
ಈ ಬೀಕನ್‌ನ ತುದಿಯಲ್ಲಿ ಒಂದು ವಿಶೇಷವಾದ ಸೆನ್ಸಾರ್ ಇರುತ್ತದೆ. ಇದು ಒಣಗಿದ್ದಾಗ ನಿಷ್ಕ್ರಿಯವಾಗಿರುತ್ತದೆ. ಆದರೆ ಯಾವಾಗ ಇದು ನೀರಿನ (ಸಿಹಿ ನೀರು ಅಥವಾ ಉಪ್ಪು ನೀರು) ಸಂಪರ್ಕಕ್ಕೆ ಬರುತ್ತದೋ, ಆಗ ನೀರು ಒಂದು ವಿದ್ಯುತ್ ವಾಹಕವಾಗಿ (Conductor) ವರ್ತಿಸಿ ಸರ್ಕ್ಯೂಟ್ ಅನ್ನು ಪೂರ್ಣಗೊಳಿಸುತ್ತದೆ. ತಕ್ಷಣವೇ ಬ್ಯಾಟರಿ ಆನ್ ಆಗುತ್ತದೆ. ಅಂದರೆ, ಪೈಲಟ್ ಸ್ವಿಚ್ ಒತ್ತುವ ಅಗತ್ಯವಿಲ್ಲ. ನೀರಿಗೆ ಬಿದ್ದ ತಕ್ಷಣ ಅದು ತಾನಾಗಿಯೇ ಕೆಲಸ ಆರಂಭಿಸುತ್ತದೆ.
ನೀರಿನ ಒಳಗೆ ರೇಡಿಯೋ ಸಿಗ್ನಲ್ ಅಥವಾ ಬೆಳಕು ಹೆಚ್ಚು ದೂರ ಚಲಿಸುವುದಿಲ್ಲ, ಆದರೆ 'ಶಬ್ದ' (Sound) ಅತ್ಯಂತ ವೇಗವಾಗಿ ಮತ್ತು ದೂರದವರೆಗೆ ಚಲಿಸುತ್ತದೆ. ಹೀಗಾಗಿ ULB ಒಂದು ನಿರ್ದಿಷ್ಟವಾದ ಶಬ್ದವನ್ನು ಹೊರಸೂಸುತ್ತದೆ. ಆವರ್ತನ (Frequency - 37.5 kHz) ಹೊರಸೂಸುವ ಶಬ್ದವನ್ನು ಮನುಷ್ಯರ ಕಿವಿಯಿಂದ ಕೇಳಲು ಸಾಧ್ಯವಿಲ್ಲ. ಮನುಷ್ಯರು ಸಾಮಾನ್ಯವಾಗಿ 20 Hz ನಿಂದ 20,000 Hz (20 kHz) ವರೆಗಿನ ಶಬ್ದವನ್ನು ಮಾತ್ರ ಕೇಳಬಲ್ಲರು. ಆದರೆ ಬ್ಲಾಕ್ ಬಾಕ್ಸ್ 37.5 kHz ಆವರ್ತನದಲ್ಲಿ ಶಬ್ದ ಮಾಡುತ್ತದೆ. ಇದೊಂದು 'ಅಲ್ಟ್ರಾಸಾನಿಕ್' ಶಬ್ದ.
ಏಕೆ ಈ ಆವರ್ತನ? ಸಮುದ್ರದಲ್ಲಿ ತಿಮಿಂಗಿಲಗಳು, ಹಡಗುಗಳು ಮತ್ತು ಅಲೆಗಳ ಶಬ್ದವಿರುತ್ತದೆ. ಇವುಗಳ ನಡುವೆ ಗೊಂದಲವಾಗದಂತೆ ಮತ್ತು ನೀರಿನಲ್ಲಿ ಸ್ಪಷ್ಟವಾಗಿ ಕೇಳಿಸುವಂತೆ ಈ ನಿರ್ದಿಷ್ಟ ಆವರ್ತನವನ್ನು ಆಯ್ಕೆ ಮಾಡಲಾಗಿದೆ. 'ಪಿಂಗ್' ನಿರಂತರವಾಗಿ ಶಬ್ದ ಮಾಡುವುದಿಲ್ಲ. ಸೆಕೆಂಡಿಗೆ ಒಮ್ಮೆ 'ಪಿಂಗ್' ಎಂಬ ಶಬ್ದದ ತರಂಗವನ್ನು ಕಳುಹಿಸುತ್ತದೆ. ಹಡಗುಗಳಲ್ಲಿರುವ ಸೋನಾರ್ ಅಥವಾ ಹೈಡ್ರೋಫೋನ್ ಎಂಬ ಉಪಕರಣಗಳು ಈ ಶಬ್ದವನ್ನು ಆಲಿಸಿ, ಅದು ಯಾವ ದಿಕ್ಕಿನಿಂದ ಬರುತ್ತಿದೆ ಎಂದು ಪತ್ತೆ ಮಾಡುತ್ತವೆ. ಸಮುದ್ರದ ಆಳ ಸಾಮಾನ್ಯ ಜಾಗವಲ್ಲ. ಅಲ್ಲಿನ ಒತ್ತಡ ಮತ್ತು ಪರಿಸ್ಥಿತಿಗಳನ್ನು ಎದುರಿಸಲು ಬ್ಲಾಕ್ ಬಾಕ್ಸ್ ಮತ್ತು ಅದರ ಬೀಕನ್ ಅತಿಮಾನುಷ ಶಕ್ತಿಯನ್ನು ಹೊಂದಿರಬೇಕಾಗುತ್ತದೆ.
ಹಳೆಯ ನಿಯಮದ ಪ್ರಕಾರ, ಬ್ಯಾಟರಿ ಕನಿಷ್ಠ 30 ದಿನಗಳ ಕಾಲ ಬಾಳಿಕೆ ಬರಬೇಕಿತ್ತು. ಆದರೆ ಮಲೇಷಿಯನ್ ಏರ್‌ಲೈನ್ಸ್ MH370 ಕಣ್ಮರೆಯಾದ ನಂತರ, ಈ ನಿಯಮವನ್ನು ಬದಲಾಯಿಸಲಾಯಿತು. ಈಗಿನ ಆಧುನಿಕ ಬೀಕನ್‌ಗಳು ನೀರಿನ ಒಳಗೆ 90 ದಿನಗಳ ಕಾಲ ನಿರಂತರವಾಗಿ ಸಿಗ್ನಲ್ ಕಳುಹಿಸುವ ಸಾಮರ್ಥ್ಯ ಹೊಂದಿವೆ.
ಸಾಗರದ ಆಳಕ್ಕೆ ಹೋದಂತೆ ನೀರಿನ ಒತ್ತಡ ಎಷ್ಟಿರುತ್ತದೆ ಎಂದರೆ ಅದು ಉಕ್ಕಿನ ಟ್ಯಾಂಕ್‌ಗಳನ್ನೇ ನುಜ್ಜುಗುಜ್ಜು ಮಾಡಬಲ್ಲದು. ಆದರೆ ಬ್ಲಾಕ್ ಬಾಕ್ಸ್ ಮತ್ತು ಬೀಕನ್ ಅನ್ನು 20,000 ಅಡಿ (ಸುಮಾರು 6 ಕಿಮೀ) ಆಳದವರೆಗಿನ ಒತ್ತಡವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಬೀಕನ್‌ನ ಶಬ್ದವು ನೀರಿನ ಅಡಿಯಲ್ಲಿ ಸುಮಾರು 2 ರಿಂದ 3 ಕಿಮೀ ದೂರದವರೆಗೂ ಕೇಳಿಸುತ್ತದೆ. ಹೀಗಾಗಿ ಹುಡುಕಾಟ ನಡೆಸುವ ಹಡಗುಗಳು ಅಥವಾ ಜಲಾಂತರ್ಗಾಮಿಗಳು ಅದರ ಹತ್ತಿರಕ್ಕೆ ಹೋದರೆ ಮಾತ್ರ ಸಿಗ್ನಲ್ ಸಿಗುತ್ತದೆ.
ಇದು ಹಾಳಾಗುವುದಿಲ್ಲವೇ?
ಬ್ಲಾಕ್ ಬಾಕ್ಸ್ ಕೇವಲ ನೀರಿನಲ್ಲಿ ಮುಳುಗುವುದಷ್ಟೇ ಅಲ್ಲ, ವಿಮಾನ ಅಪಘಾತದ ಭೀಕರತೆಯನ್ನು ತಡೆದುಕೊಳ್ಳಬೇಕಲ್ಲವೇ? ಅದಕ್ಕಾಗಿ ಅದರ ಸ್ಮರಣಾ ಕೋಶವನ್ನು (Memory Chip) ರಕ್ಷಿಸಲು Crash Survivable Memory Unit (CSMU) ಎಂಬ ಕವಚವಿರುತ್ತದೆ. ಇದನ್ನು ಟೈಟಾನಿಯಂ ಅಥವಾ ಬಲಿಷ್ಠ ಸ್ಟೀಲ್ ನಿಂದ ಮಾಡಲಾಗಿರುತ್ತದೆ. ಇದು 1,100 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ 1 ಗಂಟೆಯವರೆಗೆ ಬೆಂದರೂ ಒಳಗಿನ ಡೇಟಾ ಸುರಕ್ಷಿತವಾಗಿರುತ್ತದೆ. ವಿಮಾನವು ಗಂಟೆಗೆ 500 ಕಿಮೀ ವೇಗದಲ್ಲಿ ಬಂಡೆಗೆ ಡಿಕ್ಕಿ ಹೊಡೆದಾಗ ಉಂಟಾಗುವ ಆಘಾತವನ್ನು ಇದು ತಡೆದುಕೊಳ್ಳಬೇಕು.
ಇಷ್ಟೆಲ್ಲ ರಕ್ಷಣೆ ಇದ್ದರೂ, ಕೆಲವೊಮ್ಮೆ ಬ್ಲಾಕ್ ಬಾಕ್ಸ್ ಸಿಗುವುದಿಲ್ಲ. ಉದಾಹರಣೆಗೆ, ಅದು ಸಮುದ್ರದ ತಳದಲ್ಲಿ ಕೆಸರಿನಲ್ಲಿ ಆಳವಾಗಿ ಹೂತುಹೋದರೆ ಅಥವಾ ಬಂಡೆಗಳ ಸಂದಿಯಲ್ಲಿ ಸಿಲುಕಿದರೆ, ಅದರ 'ಪಿಂಗ್' ಶಬ್ದ ಹೊರಬರಲಾರದು.
