Thursday, 31 May 2018

ಉತ್ತರ ಕರ್ನಾಟಕದ ಮೊದಲ ಮಹಿಳಾ ಪೈಲೆಟ್

ಇದು ಹಿಂದುಳಿದ ನಾಡಿನಲ್ಲಿ ಆಗಸದೆತ್ತರಕ್ಕೆ ಬೆಳೆದು ನಿಂತಿರುವ ಯುವತಿಯ ಗಗನಯಾನ ಸಾಹಸಗಾಥೆ ಇದು.  ಈಕೆಯ ಬಯಕೆಗೆ ಸ್ಪಂದಿಸಿ ಪ್ರೋತ್ಸಾಹಿಸಿ ನೀರೆರೆದು ಬೆನ್ನೆಲುಬಾಗಿ ನಿಂತವರು ಆಕೆಯ ಪೋಷಕರು.  ಈಗ ಇಡೀ ಉತ್ತರ ಕರ್ನಾಟಕದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ್ದಾಳೆ.  ಅಷ್ಟೇ ಅಲ್ಲ, ನಮ್ಮ ಉತ್ತರ ಕರ್ನಾಟಕದ ಯುವತಿಯರೂ ಬಾನೆತ್ತರಕ್ಕೆ ಬೆಳೆಯಬಲ್ಲರು ಎಂಬುದಕ್ಕೆ ಈಕೆ ತಾಜಾ ಉದಾಹರಣೆಯಾಗಿದ್ದಾರೆ.

ಬಾನಾಡಿಗಳಂತೆ ಮಗಳು ಹಾರಾಡುತ್ತಿರುವದನ್ನು ಕಂಡು ಈಕೆಯ ಪೋಷಕರಿಗಷ್ಟೇ ಅಲ್ಲ, ಇಡೀ ಬರದ ನಾಡಿಗೂ ಕೀರ್ತಿ ತಂದಿದೆ. ಆಕೆ ಬರದ ನಾಡಿನ ಯುವತಿ.  ಆದರೆ, ಪ್ರೋತ್ಸಾಹಕ್ಕೆ ಯಾವುದೇ ರೀತಿಯಲ್ಲಿ ಬರ ಬಾರದಂತೆ ಸಹಕಾರ ನೀಡಿ ಬೆಳೆಸಿದರುವ ಆಕೆಯ ಪೋಷಕರು.  ಅಂದು ಮಗಳಿಗೆ ಇವರು ನೀಡಿದ ಪ್ರೋತ್ಸಾಹ ಇಂದು ಫಲ ನೀಡಿದೆ.  ಈಕೆಯ ಪೋಷಕರು ಅಷ್ಟೇ ಏಕೆ, ಇಡೀ ರಾಜ್ಯದ ಜನ ಭೂಮಿಯಿಂದ ಆಗಸದೆತ್ತರಕ್ಕೆ ತಲೆ ಎತ್ತಿ ನೋಡುವಂತೆ ಮಾಡಿದೆ.

ಆಕೆಯ ಹೆಸರು ಪ್ರೀತಿ.  ತಂದೆ ಸುಧೀರ ತಾಯಿ ಕವಿತಾ ಬಿರಾದಾರ.  ತಮ್ಮ ಯಶ್, ತಂಗಿ ಅದಿತಿ.  ಹೀಗೆ ತಂದೆ-ತಾಯಿ ಹಾಗೂ ತಮ್ಮ ಮತ್ತು ತಂಗಿಯ ಜೊತೆ ತನಗಿಷ್ಠ ಬಂದಂತೆ ಬೆಳೆದು ಈಗ ಈ ಸಾಧನೆ ಮಾಡಿರುವ ಈ ಯುವತಿ ವಿಜಯಪುರ ನಗರದ ಅಕ್ಕಮಹಾದೇವಿ ರಸ್ತೆಯ ಬಳಿ ಇರುವ ಸುಪ್ರಭಾತ ಫಾರ್ಮಸಿ ಮನೆಯಲ್ಲಿ ವಾಸಿಸುವ ಸಾಮಾನ್ಯ ಯುವತಿ.  ಆದರೆ ಈಗ ಮಾಡಿರವ ಸಾಧನೆ ಅಸಾಮಾನ್ಯ.  ಆಕೆ ಮಾಡಿದ ಸಾಧನೆ ಇಡೀ ರಾಜ್ಯ ನಿಬ್ಬೆರಗಾಗಿ ನೋಡುವಂತೆ ಮಾಡಿದೆ.  ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಯಾವೊಬ್ಬ ಮಹಿಳೆಯೂ ಮಾಡದ ಸಾಧನೆಯನ್ನು ಈಕೆ ಮಾಡಿದ್ದಾಳೆ.

ಈಕೆ ಮಾಡಿರುವ ಸಾಧನೆಯೂ ಬಲು ಅಪರೂಪ.  ಅದೇನೆಂದರೆ ವಿಮಾನದಲ್ಲಿ ಪೈಲೆಟ್ .  ಈಗಾಗಲೇ ತರಬೇತಿ ಪೂರ್ಣಗೊಳಿಸಿ ಸಹ ಪೈಲೆಟ್ ಆಗಿದ್ದ ಈ ಯುವತಿ ಈಗ ಪ್ರೊಮೋಷನ್ ಅಂದರೆ ಬಡ್ತಿ ಪಡೆದು ಪೈಲೆಟ್ ಆಗಿದ್ದಾಳೆ.  ಈ ಯುವತಿ ನವದೆಹಲಿಯಲ್ಲಿ ಇಂಡಿಗೋ ವಿಮಾನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಗಳ ಸಾಧನೆ ಕಂಡು ಪೋಷಕರೂ ಹಿರಿಹಿರಿ ಹಿಗ್ಗಿದ್ದಾರೆ.  ಯಾವ ಉದ್ಯೋಗವನ್ನು ಮಾಡಲು ಪುರುಷರೇ ಹಿಂಜರಿಯುತ್ತಾರೆಯೋ ಅದೇ ಕೆಲಸವನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡು ಯಶಸ್ಸು ಕಂಡಿರುವ ಮಗಳ ಬಗ್ಗೆ ಇವರಿಗೆಲ್ಲ ಈಗ ಹೆಮ್ಮೆಯಾಗಿದೆ.  ಅವಳು ಓಡಿಸುವ ವಿಮಾನದಲ್ಲಿ ಸಂಚರಿಸುವ ಮಹದಾಸೆ ಪೋಷಕರದ್ದಾಗಿದೆ.

ಬಿ. ಇ. ಎಂಜಿನಿಯರಿಂಗ್ ಮುಗಿಸುವವರೆಗೂ ಪ್ರೀತಿ ಸುಧೀರ ಬಿರಾದಾರ ಪರೀಕ್ಷೆ ಫಲಿತಾಂಶದಲ್ಲಿ ಶೇಕಡ 90ಕ್ಕೂ ಹೆಚ್ಚು ಅಂಕ ಗಳಿಸಿ ಸೈ ಎನಿಸಿಕೊಂಡಿದ್ದಳು.  ಸ್ನಾತಕೋತ್ತರ ಪದವಿ ಎಂಎಸ್ ನ್ನು ವಿದೇಶದಲ್ಲಿ ಓದಬೇಕೆಂದುಕೊಂಡಿದ್ದಳು.  ಆದರೆ, ಎಂ. ಎಸ್. ಓದಿಸಿದರೆ ಮಗಳು ತಮ್ಮಿಂದ ದೂರವಾಗಿ ಬಿಡುತ್ತಾಳೆ.  ಮುಂದೆ ಭೇಟಿಯೇ ಅಪರೂಪ ಎಂದು ಭಾವಿಸಿದರು.  ಐಎಎಸ್ ಸ್ಟಡಿ ಮಾಡು ಎಂದು ಕಿವಿಮಾತು ಹೇಳಿದರು.  ಪ್ರೀತಿಗೆ ಅದು ಇಷ್ಟವಾಗಲಿಲ್ಲ. ಐಐಎಂ ಕ್ರ್ಯಾಷ್ ಕೋರ್ಸ್ ಗೆ ತರಬೇತಿಗೆ ಕಳುಹಿಸಿದರು.  ಆದರೆ, ಅಲ್ಲಿ ಆಕೆ ಕೇವಲ ಶೇಕಡ 70 ರಷ್ಟು ಮಾತ್ರ ಅಂಕ ಗಳಿಸಿದಳು.  ಅಷ್ಟರಲ್ಲಿ ನ್ಯಾಶನಲ್ ಫ್ಲಾಯಿಂಗ್ ಆ್ಯಂಡ್ ಟ್ರೇನಿಂಗ್ ಅಕ್ಯಾಡೆಮಿ ಪ್ರವೇಶ ಪರೀಕ್ಷೆಗೆ ಅರ್ಜಿ ಕರೆಯಲಾಗಿತ್ತು.  ಅದರಲ್ಲಿ ಪಾಸಾದ ಪ್ರೀತಿ ಸುಧೀರ ಬಿರಾದಾರ ಗೆ ಆಕೆಯ ಕುಟುಂಬದ ಹಿರಿಯ ಸದಸ್ಯರ ವಿರೋಧದ ನಡುವೆಯೂ ಪೋಷಕರು ಒಪ್ಪಿಗೆ ಸೂಚಿಸಿದರು.  ಈಗ ಆಕೆ ಮಾಡಿರುವ ಸಾಧನೆಯನ್ನು ಕಣ್ಣಾರೆ ಕಂಡಿರುವ ಸುಧೀರ ಮತ್ತು ಕವಿತಾ ಬಿರಾದಾರ ದಂಪತಿ ಹರ್ಷಕ್ಕೆ ಪಾರವೇ ಇಲ್ಲದಾಗಿದೆ.

18 ತಿಂಗಳು ನಾಗ್ಪುರ ಬಳಿಯ ಗೊಂಡಾ ಸೇರಿದಂತೆ ದುಬೈನಲ್ಲಿ ತರಬೇತಿ ಪಡೆದು ಬಂದಿರುವ ಈ ಯುವತಿಯ ಮನೆಯಲ್ಲಿ ಈಗ ಸಂತಸ ಮನೆ ಮಾಡಿದೆ.  ತರಬೇತಿಗೂ ಮುಂಚೆ ಪ್ರೀತಿ ಸುಧೀರ ಬಿರಾದಾರ ಎಂದೂ ವಿಮಾನದಲ್ಲಿ ಹಾರಾಟ ನಡೆಸಿರಲಿಲ್ಲ.  ಗುಮ್ಮಟ ನಗರಿ, ಅಣ್ಣ ಬಸವಣ್ಣನ ತವರು ಜಿಲ್ಲೆ ಎಂದೆಲ್ಲ ಹೆಸರುವಾಸಿಯಾಗಿರುವ ವಿಜಯಪುರದಲ್ಲಿ ವಿಮಾನ ನಿಲ್ದಾಣವೂ ಇಲ್ಲ.  ಇನ್ನು ಇಲ್ಲಿಯ ಜನ ಹೆಲಿಕಾಪ್ಟರ್ ಹಾರಾಟವನ್ನು ನಗರದಲ್ಲಿ ಕಣ್ಣಾರೆ ಕಂಡಿದ್ದಾರೆಯೇ ಹೊರತು, ಗಗನದ ಲೋಹದ ಹಕ್ಕಿಯ ಹಾರಾಟವನ್ನು ಜಿಲ್ಲೆಯಲ್ಲಿ ನೋಡಿದ್ದೂ ಅಪರೂಪ, ಆದರೂ ಪ್ರೀತಿಯಿಂದ ಕಲಿತ ವಿದ್ಯೆ ಕೈಹಿಡಿದ ಪರಿಣಾಮ ಪ್ರೀತಿ ಸುಧೀರ ಬಿರಾದಾರ ಈಗ ಪೈಲಟ್ ಆಗಿದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ತರಬೇತಿಯ ಕುರಿತು ಮಾತನಾಡುವ ಪ್ರೀತಿ ಸುಧೀರ ಬಿರಾದಾರ, ತಾನೆಂದೂ ಬಾನೆತ್ತರದಲ್ಲಿ ಹಾರಾಡುವಾಗ ಹೆದರಲಿಲ್ಲ.  ಮುಂಚೆಯಿಂದಲೂ ಕೆಲವು ಬಾರಿ ಪ್ಯಾರಾಸೇಲಿಂಗ್ ನಲ್ಲಿ ಭಾಗಿಯಾಗಿದ್ದರಿಂದ ಭಯ ಎಂಬುದು ಗೊತ್ತೆ ಇಲ್ಲ.  ತರಬೇತಿ ಸಂದರ್ಭದಲ್ಲಿ ಸುಮಾರು 8 ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸಲಾಗುತ್ತದೆ.  ಕೆಲವು ಬಾರಿ ತರಬೇತುದಾರರ ಜೊತೆಯಲ್ಲಿ ಮತ್ತೆ ನಂತರ ಏಕಾಂಗಿಯಾಗಿ ವಿಮಾನ  ಚಲಾಯಿಸಬೇಕಾಯಿತು ಎಂದು ತರಬೇತಿಯ ಮಾಹಿತಿಯ ಬುತ್ತಿಯನ್ನು ತೆರೆದಿಡುತ್ತಾಳೆ ಪ್ರೀತಿ ಸುಧೀರ ಬಿರಾದಾರ.

ಇದೀಗ ತರಬೇತಿ ಮುಗಿಸಿಕೊಂಡು ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿರುವ ಪ್ರೀತಿ ಸುಧೀರ ಬಿರಾದಾರ, ತಮ್ಮೆಲ್ಲ ಸಾಧನೆಗೆ ಪೋಷಕರೇ ಸ್ಪೂರ್ತಿ.  ಎಲ್ಲ ಹೆಣ್ಣು ಮಕ್ಕಳು ಬಯಸುವ ವಿದ್ಯೆಯೆನ್ನು ಪೋಷಕರು ಒದಗಿಸಿದರೇ, ಅವರೂ ಕೂಡ ತನ್ನಂತೆಯೇ ಸಾಧನೆ ಮಾಡಬಲ್ಲರು ಎಂಬುದು ಈ ಯುವತಿಯ ವಿಶ್ವಾಸವಾಗಿದೆ.

ಪ್ರೀತಿ ಸುಧೀರ ಬಿರಾದಾರ 5ನೇ ತರಗತಿಯವರೆಗೆ ವಿಜಯಪುರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಓದಿದ್ದಳು.  ಇವರ ತಂದೆ ಸುಧೀರ ಬಿರಾದಾರ ಡಿ. ಫಾರ್ಮ. ಓದಿದ್ದಾರೆ.  ಓಷಧ ಅಂಗಡಿಯಿದೆ.  ಹೋಲ್ ಸೇಲ್ ಔಷಧಿಗಳನ್ನು ಮಾರಾಟ ಮಾಡುತ್ತಾರೆ.  1972 ರಲ್ಲಿ ವಿಜಯಪುರಕ್ಕೆ ಬಂದ ಇವರು ಕೇಂದ್ರ ಮಾಜಿ ಸಚಿವ ಮತ್ತು ಪರಿಷತ ಸದಸ್ಯ ಬಸನಗೌಡ ರಾ. ಪಾಟೀಲ ಯತ್ನಾಳ ಅವರ ಬಾಲ್ಯ ಸ್ನೇಹಿತ.  ಅಷ್ಟೇ ಅಲ್ಲ, ಸಹಪಾಠಿ ಕೂಡ.  ಈ ಹಿನ್ನೆಲೆಯಲ್ಲಿ ಯತ್ನಾಳ ವಿಜಯಪುರ ಲೋಕಸಭೆ ಸದಸ್ಯರಾಗಿದ್ದಾಗ ಅವರ ಬಳಿ ತೆರಲಿದ ಸುಧೀರ ಬಿರಾದಾರ ತಮ್ಮ ಮಗಳಿಗೆ ಎಂಪಿ ಕೋಟಾದಲ್ಲಿ ಪ್ರವೇಶ ನೀಡವಂತೆ ಮಾಡಿದ ಮನವಿಗೆ ಯತ್ನಾಳ್ ಸ್ಪಂದಿಸಿದ್ದರು.  ಅದು ತಮ್ಮ ಮಗಳ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಅಂತಾರೆ ಸುಧೀರ ಬಿರಾದಾರ.

ಅಲ್ಲಿಂದ ಪ್ರೀತಿ ಸುಧೀರ ಬಿರಾದಾರ ಹಿಂದಿರುಗಿ ನೋಡಿದ್ದೆ ಇಲ್ಲ.  ಮುಟ್ಟಿದ್ದೆಲ್ಲ ಯಶಸ್ಸು.   ಈ ಹಿನ್ನೆಲೆಯಲ್ಲಿ ತಮ್ಮ ಮಗಳಿಗೆ ಮಾತೊಂದನ್ನು ಅವರು ಹೇಳಿದ್ದರು.  ಅದರಂತೆ ತನ್ನ ಮೊದಲ ತಿಂಗಳ ಸಂಬಳವಾದ ಒಂದು ಲಕ್ಷ ರೂಪಾಯಿಯೊಂದಿಗೆ ವಿಜಯಪುರಕ್ಕೆ ಬಂದ ಪ್ರೀತಿ ಸುಧೀರ ಬಿರಾದಾರ ತನ್ನ ತಂದೆಯೊಂದಿಗೆ ನೇರವಾಗಿ ವಿಜಯಪುರದ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳಿದ್ದಾಳೆ.  ಅಲ್ಲಿ ಸಂಸ್ಥೆಯ ಅಧ್ಯಕ್ಷ ಬಸನಗೌಡ ರಾ. ಪಾಟೀಲ ಯತ್ನಾಳ ಅವರ ಕೈಗೆ ತನ್ನ ಮೊದಲ ತಿಂಗಳ ಸಂಬಂಳದ ಚೆಕ್ ನೀಡಿದ್ದಾಳೆ.  ಕಗ್ಗೋಡ ಗ್ರಾಮದಲ್ಲಿರುವ ನಿರ್ಗತಿಕ ಹಸುಗಳ ಗೋಶಾಲೆಗೆ ತನ್ನ ಮೊದಲ ತಿಂಗಳ ಪಗಾರನ್ನು ದಾನವಾಗಿ ನೀಡುವ ಮೂಲಕ ಋಣ ತೀರಿಸಿದ್ದಾಳೆ.

ಮನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಬೆಳೆಸಿದರೂ ಉಪಕಾರ ಹಿಡಿಯುವರ ಸಂಖ್ಯೆ ಈಗ ಕಡಿಮೆ ಇದೆ.  ಆದರೆ, ಎಂದೊ ಮಾಡಿದ ಒಂದು ಸಣ್ಣ ಕೆಲಸವನ್ನು ನೆನಪಿಟ್ಟುಕೊಂಡು ಬಂದು ಈ ರೀತಿಯಲ್ಲಿ ಋಣ ತೀರಿಸುವುದು ಕಂಡು ಸ್ವತಃ ಯತ್ನಾಳ ಮೂಕ ವಿಸ್ಮಿತರಾಗಿದ್ದಾರೆ.  ಇಂಥ ಕ್ಷಣಗಳು ಎಷ್ಟೇ ಹಣ ಗಳಿಸಿದರೂ ಸಿಗುವುದಿಲ್ಲ. ಎಷ್ಟೇ ದೊಡ್ಡ ಹುದ್ದೆಯಲ್ಲಿ ಅಧಿಕಾರದಲ್ಲಿದರೂ ಬರಲಾರವು ಎಂಬುದು ಬಸನಗೌಡ ರಾ. ಪಾಟೀಲ ಯತ್ನಾಳ ಅವರ ಅಭಿಮಾನದಿಂದ ಹೇಳುತ್ತಾಳೆ.   ಮಕ್ಕಳ ಕನಸನ್ನು ನಿರೇರೆದು ಪ್ರೋತ್ಸಾಹಿಸಬೇಕು.  ಅದರಲ್ಲಿಯೂ ಬಾಲಕಿಯರ ವಿದ್ಯಾಭ್ಯಾಸಕ್ಕಾಗಿ ಸರಕಾರ ಹಾಗೂ ಬ್ಯಾಂಕುಗಳು ಸಾಲ ನೀಡುತ್ತವೆ.  ಇದನ್ನು ಸದುಪಯೋಗ ಪಡಿಸಿಕೊಂಡು ಉತ್ತರ ಕರ್ನಾಟಕದಲ್ಲಿ ಯುವತಿಯರು ಉನ್ನತ ಸ್ಥಾನಕ್ಕೇರಬೇಕು ಎಂಬುದು ಸುಧೀರ ಬಿರಾದಾರ ಅವರ ಆಶಯವಾಗಿದೆ.