ಅಕ್ಷರಗಳ ಅಪ್ಪುಗೆ - ನಮ್ಮ ಒಲವಿನ 'ಅಪ್ಪು'ಗೆ
'ಅಪ್ಪು'ಗೆ ನೀಡಿದಾಗ ಆತ್ಮೀಯ
'ಅಭಿ'ಮಾನಿಗಳ ಪಾಲಿಗೆ ಮಹನೀಯ
'ವೀರ ಕನ್ನಡಿಗ'ರೆದೆಯಲ್ಲಿ ವಿರಾಜಮಾನ
'ಮೌರ್ಯ' ಸಾಮ್ರಾಜ್ಯಕ್ಕಿಂತ ವಿಸ್ತೃತ ವಿಶಾಲ ಅಪ್ಪು
ನೀವು ಗಳಿಸಿದ ಅಭಿಮಾನಿ ಸಾಮ್ರಾಜ್ಯ
'ಆಕಾಶ'ದೆತ್ತರ ಬೆಳೆದರೂ, ಭೂಮಿ ತೂಕದ ವ್ಯಕ್ತಿತ್ವ ನಿಮ್ಮದು
'ನಮ್ಮ ಬಸವ' ಶರಣರು ಬರೆದಂತೆ ಬದುಕಿದ ಜೀವ, ಕಳದೇ, ಕೊಲದೇ ಹುಸಿಯ ನುಡಿಯದೇ ಬದುಕಿದ ದೇಹ
'ಅಜಯ'ರಾಗಿ ಬೆಳೆದ, ಮನದಿ ಉಳಿದ ವಿಶೇಷ ವ್ಯಕ್ತಿ
'ಅರಸು'ತಿದೆ ಕೋಟಿ ಕೋಟಿ ಜೀವಗಳು ನಿಮ್ಮದೇ ದಾರಿಯ
'ಮಿಲನ'ವಾದಂತಿದೆ ಸದ್ಗುಣಗಳೆಲ್ಲ ನಿಮ್ಮುಸಿರಿನೊಳಗೆ
'ಬಿಂದಾಸ್' ಆಗಿ ಬದುಕುವವರಿಗೂ ದಾನ ಧರ್ಮ ಪರಿಶ್ರಮದ ಮಹತ್ವ ಸದ್ದಿಲ್ಲದೆ ತಿಳಿಸಿದಿರಿ
'ವಂಶಿ'ಯವಾಗಿ ಬಂದಿರಬಹುದು ಆ ಸಹಜತೆ, ಮಾನವೀಯತೆ
'ರಾಜ'ನಂತೆ ರಾಜ್ಯಭಾರ ಮಾಡಿದಿರಿ ಸಿನಿಲೋಕದಲ್ಲಿ
'ರಾಮ'ನಂತೆ ಇದ್ದಿರಿ ಮಡದಿಯ ಪ್ರೀತಿಸುವ ವಿಷಯದಲ್ಲಿ
'ಪೃಥ್ವಿ'ಯಲ್ಲಿ ನಿಮ್ಮಂಥವರು ಅಪರೂಪ...
'ಜಾಕಿ'ಯಾಗಿ ನೀವು ಏರಿದ ಸಿನಿಕುದುರೆ ಇಂದಿಗೂ ರೇಸ್ ನಲ್ಲಿ ಸಾಗುತ್ತಲೇ ಇದೆ.. ಅಭಿಮಾನದ ಹಾದಿಯಲ್ಲಿ, ಅಚ್ಚಳಿಯದ ರೀತಿಯಲ್ಲಿ..
'ಹುಡುಗರು' ನಿಮ್ಮ ಸಹೃದಯಿ ಕೆಲಸಕ್ಕೆ ತಲೆ ಬಾಗಿದರು
'ಪರಮಾತ್ಮ' ಕೂಡ ಮೆಚ್ಚುವಂಥ ಜೀವಾತ್ಮ ನೀವು
'ಅಣ್ಣಾ ಬಾಂಡ್' ಆಗಿ ಕುಣಿದು ಕುಪ್ಪಳಿಸಿದ, ನೀವು ಕಲಾ ರಸಿಕರ ಪಾಲಿಗೆ ಬೆಲೆ ಕಟ್ಟಲಾಗದ ಬ್ರಾಂಡ್ ನೀವು..
'ಯಾರೇ ಕೂಗಾಡಲಿ' ಅಥವಾ ಹೊಗಳಿಕೆ ನೂರಾಗಲಿ, ಎರಡು ಸಂದರ್ಭದಿ ನೀವೆಂದು ಬೀಗಲಿಲ್ಲ
'ನಿನ್ನಿಂದಲೇ' ಸದ್ಗತಿ ಎಂದು ಗುರುರಾಯರಿಗೆ ತಲೆಬಾಗಿದ ರಾಯರ ಪರಮಭಕ್ತ
'ಪವರ್' ಹೌಸ್ ಇಂದ ಬಂದರೂ, ಅದನ್ನು ದುರುಪಯೋಗ ಪಡಿಸಿಕೊಳ್ಳದೆ ಮಾದರಿಯಾದವರು
'ಮೈತ್ರಿ' ಯಾದಂತಿತ್ತು ಸಹಜತೆ ಮತ್ತು ಸರಳತೆ, ಅದರಿಂದಲೇ ಹೆಚ್ಚಿತು ನಿಮ್ಮ ಘನತೆ..
'ರಣವಿಕ್ರಮ'ನಾಗಿ ನೀವು ಯಮನೆದುರು
ಹೋರಾಡಲಿಲ್ಲ ಏಕೆ..?
ಒಳ್ಳೆತನವು ಹೀಗೆ ನಡುದಾರಿಯಲ್ಲಿ ಸಾವಿಗೆ ಶರಣಾಗಬೇಕೆ..?
'ಚಕ್ರವ್ಯೂಹ'ದಿ ನಿಮ್ಮನ್ನು ಸಿಲುಕಿಸಿದ ಆ ದೇವರು,
ಮರಳಿ ಬರಲಿಲ್ಲ ನೀವು, ಈಗ ನೋಡಿ,
ಆ ನೋವಲ್ಲಿ ನರಳುತ್ತಿರುವುದು ನಿಮ್ಮ ಅಭಿಮಾನಿ ದೇವರು..
'ದೊಡ್ಮನೆ ಹುಡುಗ'ನ ದೊಡ್ಡತನ ಕೊಂಡಾಡುತಿದೆ ಜಗತ್ತು, ಈ ಅಭಿಮಾನದ ಪರಾಕಾಷ್ಠೆ ನೋಡಲು ನೀವಿರಬೇಕಿತ್ತು..
'ರಾಜಕುಮಾರ'ನಾಗಿ ಇರುವಿರಿ ಸದಾ ಕಾಲ ನಮ್ಮ ಅಭಿಮಾನದ ರಾಜ್ಯದಲ್ಲಿ, ನಿಮ್ಮ ನೆನಪು ಅಜರಾಮರ..
'ಅಂಜನಿಪುತ್ರ' ಹನುಮ ಸಂಜೀವಿನಿಯನ್ನು ತಂದು,
ನಮಗಾಗಿ ನಿಮ್ಮನ್ನು ಉಳಿಸಬೇಕಿತ್ತು..
'ನಟಸಾರ್ವಭೌಮ'ನ ಕುಡಿಯಾಗಿ
ವರನಟರ ಸಾಧನೆಯನ್ನು ಇನ್ನಷ್ಟು ಜೀವಂತವಾಗಿಸಿದಿರಿ, ಅಪ್ಪನ ಘನತೆಗೆ ನಾವೀನ್ಯತೆ ತುಂಬಿದಿರಿ..
'ಯುವರತ್ನ'ನಾಗಿ ಬೆಳ್ಳಿತೆರೆಯಲ್ಲಿ ಮಿಂಚಿದಿರಿ,
ಕರ್ನಾಟಕ ರತ್ನ ಪಡೆದು ಕರುನಾಡಿಗೆ ಖುಷಿಯ ಹಂಚಿದಿರಿ..
'ಜೇಮ್ಸ್' ಎಂಬ ಹೆಸರಲ್ಲಿ ಬರುತ್ತಿದ್ದೀರಿ ಬೆಳ್ಳಿಪರದೆಗೆ..
ಸಹಸ್ರ ಸಹಸ್ರ ಅಭಿಮಾನಿಯ ಎದೆಯಲ್ಲಿ ಈಗ ನಿಮ್ಮದೇ ಅಭಿಮಾನದ ಫ್ರೇಮ್ಸ್ ಇದೆ.. ಮತ್ತದು ಎಂದಿಗೂ ಇರುತ್ತದೆ....
ತುಂಬು ಅಭಿಮಾನದಿಂದ ಬರೆದ ಸಾಲುಗಳಿವು
ರಚನೆ - ಯಲ್ಲಪ್ಪ ನಂದಿ. 17th March 2022