ವಿಚಿತ್ರವೀರ್ಯ ಮಹಾಭಾರತದಲ್ಲಿ ಶಂತನು ಮತ್ತು ಸತ್ಯವತಿಯ ಮಗ.ಇವನ ಅಣ್ಣ ಚಿತ್ರಾಂಗದ ಶಂತನುವಿನ ನಂತರ ಹಸ್ತಿನಾಪುರದ ಪಟ್ಟವೇರಿದ.ಚಿತ್ರಾಂಗದ ಸಂತಾನವಿಲ್ಲದೆ ನಿಧನ ಹೊಂದಿದುದರಿಂದ ಅವನ ತಮ್ಮನಾದ ವಿಚಿತ್ರವೀರ್ಯ ಸಿಂಹಾಸನವನ್ನೇರಿದ.ಇವನು ಪಟ್ಟವೇರಿದ ಸಮಯದಲ್ಲಿ ಇನ್ನೂ ಬಾಲಕನಾಗಿದ್ದುದರಿಂದ ಸತ್ಯವತಿಯ ಇನ್ನೊಬ್ಬ ಮಗನಾದ ಭೀಷ್ಮನು ಇವನ ಪರವಾಗಿ ರಾಜ್ಯಭಾರ ನಿಭಾಯಿಸಿದ.ಇವನು ಪ್ರಾಯ ಪ್ರಬುದ್ಧನಾದ ಸಮಯದಲ್ಲಿ ಇವನಿಗಾಗಿ ಭೀಷ್ಮನು ಕನ್ಯೆಯನ್ನು ಅರಸುತ್ತಿರುವಾಗ ಕಾಶಿಯ ರಾಜ ಸ್ವಯಂವರವನ್ನು ಏರ್ಪಡಿಸಿದ ವಿಷಯ ತಿಳಿದು ಅಲ್ಲಿಗೆ ಧಾವಿಸಿದ.ಅಲ್ಲಿ ಸ್ವಯಂವರವನ್ನು ವಿಚಿತ್ರವೀರ್ಯನ ಪರವಾಗಿ ಗೆದ್ದು ಕಾಶಿ ರಾಜನ ಮೂವರು ಕುವರಿಯರಾದ ಅಂಬಾ,ಅಂಬಿಕ ಮತ್ತು ಅಂಬಾಲಿಕರನ್ನು ಕರೆತರಲು ಪ್ರಯತ್ನಿಸಿದ. ಆದರೆ ಅಂಬಾ ಮೊದಲೇ ಸಾಳ್ವನನ್ನು ಪ್ರೀತಿಸುತ್ತಿದ್ದುದರಿಂದ ಅಂಬಿಕ ಮತ್ತು ಅಂಬಾಲಿಕೆಯರನ್ನು ಒತ್ತಾಯ ಪೂರ್ವಕ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಿದ. ಮುಂದೆ ವಿಚಿತ್ರವೀರ್ಯನಿಗೆ ಮಕ್ಕಳಾಗುವ ಮೊದಲೇ ಕ್ಷಯ ರೋಗದಿಂದ ತೀರಿಕೊಂಡುದುದರಿಂದ ತಾಯಿ ಸತ್ಯವತಿ ಭೀಷ್ಮನಿಗೆ ಅಂಬಿಕ ಮತ್ತು ಅಂಬಾಲಿಕೆಯರನ್ನು ಮದುವೆಯಾಗುವಂತೆ ತಿಳಿಸುತ್ತಾಳೆ. ಆದರೆ ಭೀಷ್ಮನು ಮೊದಲೇ ಆಜನ್ಮ ಬ್ರಹ್ಮಚಾರಿಯಾಗಿರುವುದಾಗಿ ಶಪಥ ಮಾಡಿದ್ದುದರಿಂದ ಸತ್ಯವತಿಯ ಇನ್ನೊಬ್ಬ ಮಗನಾದ ವ್ಯಾಸನನ್ನು ಕರೆದು ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಮಕ್ಕಳನ್ನು ಕರುಣಿಸುವಂತೆ ಹೇಳಲು ಹೇಳುತ್ತಾನೆ. ಅದರಂತೆ ವ್ಯಾಸನ ಮೂಲಕ ಸತ್ಯವತಿಯು ಅಂಬಿಕೆ ಮಾತು ಅಂಬಾಲಿಕೆಯರಿಗೆ ಮಕ್ಕಳಾಗುವಂತೆ ಮಾಡುತ್ತಾಳೆ. ಇವರೇ ಅಂಬಿಕೆಯ ಮಗ ಧೃತರಾಷ್ಟ್ರ ಮತ್ತು ಅಂಬಾಲಿಕೆಯ ಮಗ ಪಾಂಡುವಾಗಿ ಮಹಾಭಾರತ ಕಥೆಯಲ್ಲಿ ಪ್ರಸಿದ್ಧರಾದವರು.
Tuesday, 29 September 2020
ಶಿಖಂಡಿ
ಶಿಖಂಡಿ ಎಂಬುದು ಮಹಾಭಾರತದಲ್ಲಿ ಬರುವ ಒಂದು ವಿಶಿಷ್ಟ ಪಾತ್ರ. ಪಾಂಚಾಲ ದೇಶದ ರಾಜನಾದ ದ್ರುಪದನ ಮಗಳು. ಆಕೆಯ ಅಣ್ಣ ದೃಷ್ಟದ್ಯುಮ್ನ. ಮೂಲತಃ ಹೆಣ್ಣಾಗಿ ಹುಟ್ಟಿದ್ದರೂ ತನ್ನ ಗುಣ, ಶೌರ್ಯ, ವರ್ತನೆಗಳಿಂದ ಗಂಡಸೆಂದು ಬಿಂಬಿಸಲ್ಪಟ್ಟ ಪಾತ್ರವಿದು.
ಹಿನ್ನೆಲೆ
·
ಭೀಷ್ಮ ತನ್ನ ತಮ್ಮನಾದ ವಿಚಿತ್ರವೀರ್ಯನ ಮದುವೆಗೆಂದು ಅಂಬೆ, ಅಂಬಿಕಾ, ಅಂಬಾಲಿಕ ಎಂಬ ಮೂವರು ರಾಜಕುಮಾರಿಯನ್ನು ಅಪಹರಿಸುತ್ತಾನೆ. ಅವರಲ್ಲಿ ಅಂಬೆ (ಅಂಬಾ) ತಾನು ಮತ್ತೊಬ್ಬ ವ್ಯಕ್ತಿಯನ್ನು ಈಗಾಗಲೇ ಪ್ರೀತಿಸಿರುವದಾಗಿಯೂ, ತನ್ನನ್ನು ಬಿಟ್ಟು ಬಿಡಬೇಕೆಂದೂ ಭೀಷ್ಮನಲ್ಲಿ ವಿನಂತಿಸಿಕೊಳ್ಳುತ್ತಾಳೆ. ಮನ ಕರಗಿದ ಭೀಷ್ಮ ಅಂಬೆಯನ್ನು ಆಕೆಯ ಪ್ರಿಯಕರನಿಗೋಸ್ಕರ ಕಳಿಸಿಕೊಡುತ್ತಾನೆ.
·
ಆದರೆ ಪ್ರಿಯಕರ ಅಂಬೆಯನ್ನು ತಿರಸ್ಕರಿಸುತ್ತಾನೆ. ಈಗ ಅಂಬೆಯದು ವಿಚಿತ್ರ ಪರಿಸ್ಥಿತಿ. ಇತ್ತ ಪ್ರಿಯಕರನಿಂದಲೂ ತಿರಸ್ಕೃತಗೊಂಡು ಅತ್ತ ವಿಚಿತ್ರವೀರ್ಯನನ್ನೂ ಮದುವೆಯಾಗದೇ ಕಂಗೆಡುತ್ತಾಳೆ. ಹತಾಶೆಗೊಂಡ ಅಂಬೆ ತೀರ ಕೊನೆಗೆ ಭೀಷ್ಮನನ್ನೇ ಮದುವೆಯಾಗುವಂತೆ ಒತ್ತಾಯಿಸು ತ್ತಾಳೆ. ಭೀಷ್ಮ ಒಪ್ಪುವುದಿಲ್ಲ. ಹೀಗೆ ಎಲ್ಲ ಕಡೆಗಳಿಂದಲೂ ತಿರಸ್ಕೃತಗೊಂಡ ಅಂಬೆ ಆಗ ಕೋಪದಿಂದ ಭೀಷ್ಮನೆದುರು ಶಪಥಗೈಯುತ್ತಾಳೆ.
ಅಂಬೆಯ ಶಪಥ
ಮುಂದಿನ ಜನ್ಮದಲ್ಲಿ ನಾನೇ ನಿನ್ನ ಸಾವಿಗೆ ಕಾರಣಳಾಗುವೆ ಎಂದು ಭೀಷ್ಮನೆಡೆಗೆ ಕೋಪದಿಂದ ಗರ್ಜಿಸುತ್ತ ತನ್ನನ್ನು ತಾನು ಅಗ್ನಿಗೆ ಅರ್ಪಿಸಿಕೊಳ್ಳುತ್ತಾಳೆ. ಹಾಗೆ ಆತ್ಮಾಹುತಿ ಮಾಡಿಕೊಂಡ ಅಂಬೆ ದ್ರುಪದನ ಮಗಳಾಗಿ ಜನಿಸುತ್ತಾಳೆ.ಆಕೆಯ ಹುಟ್ಟಿನ ಸಮಯದಲ್ಲಿ ಅಶರೀರ ವಾಣಿ ಯೊಂದು ಈಕೆಯ ಹಿನ್ನೆಲೆಯನ್ನು ತಂದೆ ದ್ರುಪದನಿಗೆ ತಿಳಿಸುತ್ತದೆ.
ಭೀಷ್ಮನಿಗೆದುರಾಗಿ
·
ಆ ಕಾರಣಕ್ಕೆ ಹೆಣ್ಣು ಮಗುವನ್ನು ಗಂಡಸಿನಂತೆ ಬೆಳೆಸುವಂತೆ ಸೂಚಿಸುತ್ತದೆ. ಹಾಗಾಗಿ ಶಿಖಂಡಿ ಹೆಣ್ಣಾದರೂ ಗಂಡಸಿನಂತೆ ಬೆಳೆಯುತ್ತದೆ. ಮುಂದೆ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣ ಭೀಷ್ಮನಿಗೆದುರಾಗಿ ಶಿಖಂಡಿಯನ್ನೇ ತಂದು ನಿಲ್ಲಿಸುತ್ತಾನೆ. ಭೀಷ್ಮ ಹೆಣ್ಣಿನ ಎದುರು ಯುದ್ಧ ಮಾಡಲಾರೆ ಎಂದು ಶಸ್ತ್ರ ಕೆಳಗಿಡುತ್ತಾನೆ.
·
ಆಗ ಕೃಷ್ಣ ಅರ್ಜುನನಿಗೆ ಮೋಸದಿಂದ ಭೀಷ್ಮನೊಂದಿಗೆ ಹೋರಾಡುವಂತೆ ಪ್ರೆರೇಪಿಸಿ ಭೀಷ್ಮನನ್ನು ಹೊಡೆದುರುಳಿಸುತ್ತಾನೆ. ಹೀಗೆ ಭೀಷ್ಮನ ಸಾವಿಗೆ ಕಾರಣವಾಗುವುದರ ಮೂಲಕ ಅಂಬೆಯು ಶಿಖಂಡಿಯಾಗಿ ತನ್ನ ಶಪಥ ಪೂರೈಸಿಕೊಳ್ಳುತ್ತಾಳೆ. ಶಿಖಂಡಿ ಎಂದರೆ 'ಉಭಯ ಲಿಂಗಿ'ಗಳು ಎಂದು ಹೇಳಲಾಗುತ್ತದೆ.
Monday, 9 March 2020
ಹೋಳಿ
ಉತ್ತರ ಭಾರತದಲ್ಲಿ ಈ ಹಬ್ಬಕ್ಕೆ ಹೆಚ್ಚು ಮಹತ್ವವಿದೆ.
ಪುರಾಣ ಕಾರಣ
ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸ ರಾಜ ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಭೋಗಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದೂ, ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.
ಮತ್ತೊಂದು ಪಾಠಾಂತರದ ಪ್ರಕಾರ- ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ದುರಹಂಕಾರಿಯೂ ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಅಂದು ಬ್ರಹ್ಮನಲ್ಲಿ ವರವನ್ನು ಬೇಡಿದ್ದ. ಭೋಗಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು "ಕಾಮನ ಹುಣ್ಣಿಮೆ"ಯಾಗಿ ಆಚರಿಸಲ್ಪಡುತ್ತದೆ.
Thursday, 20 February 2020
ಶಿವರಾತ್ರಿಯ ಮಹಿಮೆ
ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.
ಯುವರಾಜ ನಂದಿ
Sunday, 2 February 2020
ಜೀವನ
ಬದುಕೊಂದು ಸಾಗರವಾದರೆ ಅದರಾಚೆ ಕಾಣುವ ದಡವ ಮುಟ್ಟಬೇಕೆಂದು ಆಸೆಪಡುವ ಆಶಾವಾದಿಗಳೆ ನಾವು. ಈ ಓಟದಲ್ಲಿ ಪಡೆಯುವುದು ಏನಿಲ್ಲ, ಕಳೆದುಕೊಳ್ಳುವುದು ಏನಿಲ್ಲ. ಹಾಗಂತ ಓಟವನ್ನು ನಿಲ್ಲಿಸುವಂತೆಯೂ ಇಲ್ಲ. ಆದರೆ ದಡ ಸಮೀಪಿಸುತ್ತಿದ್ದಂತೆ ಉಳಿಯುವುದು ನೆನಪುಗಳು ಮಾತ್ರ ಅದರಲ್ಲಿ ಮನಸಿಗೆ ಹಿತ ನೀಡುವ ಸುಂದರ ಅಲೆಗಳು ಕೆಲವಾದರೆ, ಮುಳ್ಳುಗಳಂತೆ ಚುಚ್ಚಿ ಚುಚ್ಚಿ ಕೊಲ್ಲುವ ಭುಗಿಲೆದ್ದ ಸುನಾಮಿಗಳು ಹಲವು.
ಜೀವನವನ್ನು ಸಮುದ್ರಕ್ಕೆ ಹೋಲಿಸಲು ಕಾರಣ ಸಮುದ್ರ ನೋಡಲು ಎಷ್ಟು ಶಾಂತವೋ ಒಮ್ಮಿಂದೊಮ್ಮೆಲೆ ರುದ್ರತಾಂಡವನಂತೆ ನರ್ತಿಸುತ್ತದೆ, ಹಾಗೆ ಜೀವನವು ಕೂಡ ಒಮ್ಮೆ ಸುಂದರ ಶಾಂತವೆನಿಸಿದರೂ ಅನಿರೀಕ್ಷಿತ ತಿರುವುಗಳು ಬಂದು ಅಲ್ಲೋಲಕಲ್ಲೋಲ ಮಾಡಿಬಿಡುತ್ತವೆ. ಸಮುದ್ರದಿಂದ ನಾವು ಕಲಿಯುವ ಪಾಠವೆಂದರೆ ಯಾವುದು ಇಲ್ಲಿ ಶಾಶ್ವತವಲ್ಲ ಅಲೆಗಳಂತೆ ಸುಖ ದುಃಖಗಳು ಬಂದು ಹೋಗಿ ಬಂದು ಹೋಗಿ ಮಾಡುತ್ತಲೇ ಇರುತ್ತವೆ, ಆದರೆ ನಮ್ಮ ಮನಸ್ಸನ್ನು ಮಾತ್ರ ಸಂತೋಷದಿಂದ ಹಿಗ್ಗಲೂ ಬಿಡದೇ ದುಃಖದಿಂದ ಕುಗ್ಗಲೂ ಬಿಡದೇ ದಡದಲ್ಲಿರುವ ಮರಳಿನಂತೆ ಸ್ಥಿರವಾಗಿಟ್ಟುಕೊಂಡರೆ ಜೀವನದಲ್ಲಿ ಎಂತಹ ಸಂದರ್ಭವನ್ನಾದರೂ ಅನಾಯಾಸವಾಗಿ ಎದುರಿಸಿ ದಡವನ್ನು ಸೇರಬಹುದು.
ಯಲ್ಲಪ್ಪ ನಂದಿ
Saturday, 1 February 2020
ಜೀವನವೊಂದು ಪುಸ್ತಕದಂತೆ
ಜೀವನವೊಂದು ಪುಸ್ತಕದಂತೆ
ಕೆಲವು ಅಧ್ಯಾಯ ದುಃಖದಿಂದಿದ್ದರೆ
ಕೆಲವು ಅಧ್ಯಾಯ ಸಂತಸದಿಂದಿರುತ್ತವೆ
ಸುಮಾರು ಉತ್ತೇಜಕವಾಗಿರುತ್ತವೆ
ಆದರೆ ನೀನು ಪುಟಗಳನ್ನೇ ತಿರುವದಿದ್ದರೆ
ನಿನಗೆಂದು ತಿಳಿಯದು ಮುಂದೇನಿದೆಯೆಂದು
ದುಃಖದಿಂದ ಕುಗ್ಗದೆ ಖುಷಿಯಿಂದ ಹಿಗ್ಗದೇ
ಪ್ರತೀ ಪುಟವೂ ನಿನ್ನದೇ ಎಂದು ನಡೆಸು ಜೀವನ
ಆಗ ನಿನ್ನ ಹುಟ್ಟಾಗುವುದು ಪಾವನ
ಯಲ್ಲಪ್ಪ ನಂದಿ
ಗಂಗೆ - ಗೌರಿ
ಕೊಂಕು ನುಡಿಗೆ ಪ್ರಸಿದ್ಧ ಉದಾಹರಣೆಯಾದ ವಿಶಾಖದತ್ತನ ಮುದ್ರಾರಾಕ್ಷಸ ನಾಟಕದ ನಾಂದೀ ಪದ್ಯದಲ್ಲೂ ಗೌರಿಗೆ ಗಂಗೆಯ ಮೇಲಿದ್ದ ಅಸೂಯೆ ಅಭಿವ್ಯಕ್ತವಾಗುತ್ತದೆ.
ಗಂಗೆಯನ್ನು ತರುವ ಪೂರ್ವದಲ್ಲಿಯೇ ಗೌರಿಯ ಮುನಿಸು ಪ್ರಾರಂಭವಾಗುತ್ತದೆ. ತೊಳತೊಳತೊಳಗುತ್ತಿರುವ ಗಂಗೆಯನ್ನು ಸ್ವಪ್ನದಲ್ಲಿ ಕಂಡ ಶಿವ ಪಕ್ಕದಲ್ಲಿ ಮಲಗಿದ್ದ ಗೌರಿಗೆ ಹೇಳುತ್ತಾನೆ. ಅವನು ಯಾಕೆ ಹೇಳುತ್ತಿದ್ದಾನೆಂದು ಅವಳಿಗೆ ಅರ್ಥವಾಗುತ್ತದೆ. `ಮಕ್ಕಾಳಿರ್ಲೇಳಿ ಮನೆತುಂಬ ಎಂದು ವ್ಯಂಗ್ಯವಾಗಿ ನುಡಿದು ಮಗ್ಗುಲಾಗುತ್ತಾಳೆ. ಆದರೆ ಮರುದಿನ ಶಿವ ವೇಷಧರಿಸಿ ಹೊರಟೇಬಿಡುತ್ತಾನೆ. ಭೋಲೊಕಕ್ಕೆ ಬಂದ ಶಿವ ನೀರನ್ನು ಮೊಗೆಯುತ್ತಿರವ ಗಂಗೆಯನ್ನು ಕಂಡು ಜಪಮಾಡುತ್ತಿರುವಂತೆ ತಾನು ನಟಿಸುತ್ತಿದ್ದೇನೆಂಬುದನ್ನೂ ಮರೆಯುತ್ತಾನೆ. ಇವನ ಸ್ಥಿತಿಯನ್ನು ಕಂಡ ಗಂಗೆ 'ಜಪವ ಮರಿಸವ್ರ ಮಗಳಲ್ಲ ಎಂದು ಹಾಸ್ಯ ಮಾಡುತ್ತಾಳೆ. ಹಾಸ್ಯಕ್ಕಿಂತ ಹೆಚ್ಚಾಗಿ ಇಲ್ಲಿ ನಾನು ಬಡವರ ಮನೆಯ ಹುಡುಗಿ ಎಂಬ ದ್ಯೆನ್ಯದ ಭಾವ ಎದ್ದುಕಾಣುತ್ತದೆ. ಶಿವ ಗಂಗೆಯನ್ನು ತರುತ್ತಿರುವ ಸುದ್ದಿಯನ್ನು ಗಿಣಿರಾಮನಿಂದ ತಿಳಿದು ಗೌರಿ ಅಪ್ಪನ ಮನೆಗೆ ಹೊರಡುತ್ತಾಳೆ. ಅವರು ಬರುವ ಹೊತ್ತಿಗೆ ರಾಡ್ಮುಂಡ್ಗೆ (ಮಂಡಿಗದ್ದಗಳನ್ನು ಸೇರಿಸಿ ಮಲಗುವುದು) ಹಾಕಿ ಮಲಗು ಹೋಗು ಎಂದು ಅಪ್ಪ ಬುದ್ಧಿ ಹೇಳಿ ಕಳಿಸುತ್ತಾನೆ. ಕದ ತೆಗೆಯದೆ ಮಲಗಿದ್ದ ಗೌರಿಯನ್ನು ಹೆದರಿಸಿ ಕದ ತೆಗೆಸುತ್ತಾನೆ. ಶಿವ. ಗೌರಿ ಊಟಕ್ಕೆ ಎರಡು ಮಣೆಗಳನ್ನು ಹಾಕುತ್ತಾಳೆ. ಇಬ್ಬರುಂಟೇನೆ ಪುರಷ್ಯರು ?' ಎಂದು ಕೇಳಿದ ಶಿವನಿಗೆ 'ಸಿವ್ನ ಕೆಂಜಡೆಯ ಮುಡಿವಳಗೆ ಇರುವ ಸಿವ್ಗಂಗೇಗೆ ಒಂದು, ನಿಮಗೊಂದು ಎಂದು ಉತ್ತರಿಸುತ್ತಾಳೆ. ಶಿವ ಅಪ್ರತಿಭನಾಗುತ್ತಾನೆ. ಅನಂತರ ಗೌರಿ ಗಂಗೆಗೆ ಹರಸುತ್ತ 'ಅಂಬುಗನ ಮಗಳೆ ಸುಕುಬಾಳೊ ಎನ್ನುತ್ತಾಳೆ. ಅಂಬಿಗನ ಮಗಳು ಎಂದು ಕರೆದಳಲ್ಲ ಎಂದು ಗಂಗೆಗೆ ಚುರುಕಾಗುತ್ತದೆ. 'ಕೆಂಪೇರ ಜಗಳ ಶಂಖ ಬಾರಿಸಿದ್ಹಂಗ ಮೊದಲಾಗುತ್ತದೆ. ಜಗಳ. ಆಗಾಗ ಇಂಥ ಸಣ್ಣಪುಟ್ಟ ಜಗಳಗಳು ಇದ್ದೇ ಇರುತ್ತವೆ. ಹೀಗೇ ಇರುವಾಗ ಒಮ್ಮೆ ತಾನು ಮುಡಿದು ಮಿಕ್ಕಿದ ಹೊವನ್ನು ಗೌರಿ ಗಂಗೆಗೆ ಕಳಿಸುತ್ತಾಳೆ. ಒಳ್ಳೊಳ್ಳೆ ಹೂವನ್ನೆಲ್ಲ ತಾನು ಮುಡಿದು ಬಾಡಿಬತ್ತಿದ ಹೂವನ್ನು ಕಳಿಸಿದ್ದಾಳೆ ಎಂದುಕೊಂಡು ಗಂಗೆ ಅವನ್ನು ಬೀದಿಗೆ ಚೆಲ್ಲುತ್ತಾಳೆ, ಬೇಲಿಗೆ ಎಸೆಯುತ್ತಾಳೆ. ಇದನ್ನೆಲ್ಲ. ತಿಳಿದ ಗೌರಿ, ಗಂಗೆ ಬೆಸ್ತರ ಹುಡುಗಿಯೆಂದೂ ಅವಳ ತಂದೆ ಅಣ್ಣಂದಿರು ಮೀನು ಸೀಗಡಿ ಮಾರುವವರೆಂದೂ ಅವಳ ಬಂಧು ಬಳಗ ಸುಣ್ಣ ಸುಡುವವರೆಂದೂ ಜರೆಯುತ್ತಾಳೆ. ಸರಿ, ಪರಸ್ಪರ ಜಡೆ ಹಿಡಿದು ಜಗಳ ಪ್ರಾರಂಭಿಸುತ್ತಾರೆ. ಕುಸ್ತಿಯಲ್ಲಿ ಗಂಗೆ ಕೆಳಗೆ, ಗೌರಿ ಮೇಲೆ. ಜಗಳ ನಡೆಯುತ್ತಿದ್ದಾಗ ಗೌರಿ ಹೊರಗಾಗುತ್ತಾಳೆ. ಮಳೆದೇವರು ಗಾಳಿದೇವರುಗಳನ್ನು ಕರೆದು ಗಂಗೆ ಆಣೆ ಭಾಷೆ ತೆಗೆದುಕೊಳ್ಳುತ್ತಾಳೆ. ಭೂಮಿಯ ಮೇಲಿನ ನೀರನ್ನೆಲ್ಲ. ಮಾಯ ಮಾಡುತ್ತಾಳೆ. ಗೌರಿ ನೀರನ್ನು ತರಲು ಮಗನಾದ ಚೆನ್ನ ವೀರನನ್ನು ಕಳಿಸುತ್ತಾಳೆ. ಹುಡುಕಿ ಹುಡುಕಿ ಸಾಕಾದ ಅವನನ್ನು ಕಾಶಿಗೆ ಹೋಗು ಎನ್ನುತ್ತಾಳೆ, ಗೌರಿ. ಕಾಶಿಯಲ್ಲೂ ನೀರಿಲ್ಲ. ಅಲ್ಲಿಂದ ಬಳಲಿ ಬರುವಾಗ ಗಂಗೆ ನೋಡುತ್ತಾಳೆ. ಅಲ್ಲೊಂದು ಹಳ್ಳವನ್ನು ಸೃಷ್ಟಿಮಾಡುತ್ತಾಳೆ. ಆ ಹಳ್ಳದಲ್ಲಿ ಮನ ದಣಿಯ ನೀರು ಕುಡಿದು ಸ್ನಾನಮಾಡಿ ಬುತ್ತಿ ಬಿಚ್ಚುತ್ತಾನೆ ವೀರಣ್ಣ. ಎರಡು ಪಾಲುಮಾಡಿ ಚಿಕ್ಕವ್ವನಾದ ಗಂಗೆಗೆ ಒಂದು ಪಾಲನ್ನು ಬಿಟ್ಟು ಉಳಿದದ್ದನ್ನು ತಾನು ಉಣ್ಣುತ್ತಾನೆ. ಆಮೇಲೆ ಹನ್ನೆರಡು ಕಂಬ ಅಡ್ಡೆ ನೀರು ಮೊಗೆದು ಹೆಗಲಮೇಲೆ ಹೊತ್ತು ಮೂರು ಹೆಜ್ಜೆ ಹೋಗುವಷ್ಟರಲ್ಲಿ ಸವತಿ ಗೌರಿಗೆ ನೀರು ಹೋಗುತ್ತಿದೆ ಎಂದು ತಿಳಿದ ಗಂಗೆ ಹಳ್ಳದಲ್ಲಿದ್ದ ಮತ್ತು ಅಡ್ಡೆಯಲ್ಲಿದ್ದ ನೀರನ್ನೆಲ್ಲ ಮಾಯ ಮಾಡುತ್ತಾಳೆ. ಇದು ಗಂಗೆಯ ಮಾಯ ಎಂದು ಅವನಿಗೆ ತಿಳಿದುಹೋಗುತ್ತದೆ. ಮೂವತ್ತು ದಿನದಿಂದ ಊಟ ಇಲ್ಲದೆ ಗೌರಿ ಬಳಲುತ್ತಿದ್ದು ಕೈಲಾಸಗಿರಿಯಲ್ಲಿರುವ ಶಿವನ ಬಳಿಗೆ ಮಗನನ್ನು ಕಳಿಸುತ್ತಾಳೆ. ಶಿವನಿಗೆ ಜಗಳದ ವಿಷಯವನ್ನು ಹೇಳುತ್ತಾನೆ, ವೀರಣ್ಣ. ಶಿವ ಬರುತ್ತಾನೆ. ಗೌರಿ ಹೊರಗೆ ಕೂತಿದ್ದಾಳೆ. ಹಾಲುಮೊಸರು ತುಪ್ಪ ಜೇನುಗಳ ಅಡ್ಡೆಯನ್ನು ತರಲೇ ಎಂದು ಕೇಳುತ್ತಾನೆ ಯಾವುದರಿಂದಲೂ ತನ್ನ ಸೂತಕ ಕಳೆಯುವುದಿಲ್ಲ ಎನ್ನುತ್ತಾಳೆ. ಗಂಗೆಯ ಬಳಿಗೆ ಹೋಗು ಎನ್ನುತ್ತಾನೆ. ಸತ್ತರೂ ಆಕೆಯ ಬಳಿಗೆ ಹೋಗಲಾರೆ ಎನ್ನುತ್ತಾಳೆ. ವಿಧಿಯಿಲ್ಲದೆ ಮಗನನ್ನು ಕಳಿಸುತ್ತಾಳೆ. ನಿನಗೆ ಬೇಕಾದರೆ ಒಂದು ಚೆಂಬು ಕೊಡುತ್ತೇನೆ, ನಿನ್ನವ್ವನಿಗೆ ಇಲ್ಲ, ಎನ್ನುತ್ತಾಳೆ ಗಂಗೆ. ನಮ್ಮ ಬಾವಿಯಲ್ಲಿ ಕಪ್ಪೆ ಇರುತ್ತವೆ. ಅದು ಕಲಕುನೀರು, ಮೀನು ಇರುತ್ತವೆ. ಅದು ಹೊಲಸುನೀರು-ಎಂದು ಕಟಕಿಯಾಡಿದ ಮೇಲೆ ಬರಿಗೈಯಲ್ಲಿ ಹಿಂತಿರುಗುತ್ತಾನೆ, ವೀರಣ್ಣ. ಪೆಟ್ಟಿಗೆಯಲ್ಲಿದ್ದ ಪಟ್ಟೆಸೀರೆ ಉಟ್ಟುಕೊಂಡು ಆಭರಣಗಳನ್ನೆಲ್ಲ ಧರಿಸಿಕೊಂಡು ಐದು ಜನ ಮಕ್ಕಳನ್ನು ಕರೆದುಕೊಂಡು ಗೌರಿಯೇ ಹೊರಡುತ್ತಾಳೆ. ಎಷ್ಟು ಕೂಗಿದರೂ ಗಂಗೆ ಬಾಗಿಲು ತೆಗೆಯುವುದಿಲ್ಲ. ಉಟ್ಟಿದ್ದ ಪಟ್ಟೆಸೀರೆ ಆಭರಣಗಳು ಐದು ಜನ ಮಕ್ಕಳು-ಏನು ಬೇಕಾದರೂ ಕೊಡುವೆನೆಂದರೂ ಉತ್ತರ ಬರುವುದಿಲ್ಲ. ಕೊನೆಗೆ ನನ್ನ ಭಾಗದ ಗಂಡನನ್ನು ಕೊಡುತ್ತೇನೆ ಎಂದಾಗ, ಹಾಲು ಅನ್ನ ಮುಟ್ಟಿ ಭಾಷೆ ಮಾಡಿಸಿಕೊಂಡು, ಗಂಗಮ್ಮ ಬಾಗಿಲು ತೆಗೆಯುತ್ತಾಳೆ. ಮಳೆದೇವರು ಗಾಳಿ ದೇವರನ್ನು ಕರೆದು ಆಣೆ ಭಾಷೆ ಬಿಡಿಸುತ್ತಾಳೆ.ಗುಡುಗು ಮಿಂಚುಗಳು ಕಾಣಿಸಿ ಜಡಿಮಳೆ ಸುರಿಯುತ್ತದೆ. ಸೂತಕ ತೀರಿಸಿಕೊಂಡು, ಇಬ್ಬರೂ ಜೊತೆಯಲ್ಲಿ ಈಜಾಡಿ, ಜೊತೆಯಲ್ಲಿ ಹಾಲು ಅನ್ನ ಉಂಡು, ಆಮೇಲೆ ಇವತ್ತು ರಾತ್ರಿ ಶಿವನನ್ನು ಕಳುಹು ಎಂಬ ಗಂಗೆಯ ಮಾತನ್ನು ಕೇಳಿ 'ಎಲ್ಲಾದ್ರೂ ಉಂಟೇನೆ ಎಂದು ಹೇಳಿ ಮಾತಿಗೆ ತಪ್ಪುತ್ತಾಳೆ ಗೌರಿ ಕೇಶಾಕೇಶಿ ಮತ್ತೆ ಪ್ರಾರಂಭವಾಗುತ್ತದೆ. ಎರಡು ಮೂರು ಪೆಟ್ಟು ತಿಂದ ಗಂಗೆ ಕೈಬೀಸಿ ಮಳೆರಾಯನನ್ನು ಕರೆಯುತ್ತಾಳೆ. ಗಂಗೆ ಮೊಣಕಾಲುದ್ದ ನೀರಲ್ಲಿ ನಿಂತರೆ, ಗೌರಿ ಕೊಚ್ಚಿಹೋಗುತ್ತಾಳೆ. ಬೇಟೆಗೆ ಹೋಗಿದ್ದ ಶಿವ ಬರುತ್ತಾನೆ. ಗಂಗೆಯನ್ನು ಬೆಸ್ತರ ಮನೆಗೆ ಕಳಿಸುತ್ತ 'ವರ್ಷಕ್ಕೊಮ್ಮೆ ಮಾರಿ ಹಬ್ಬದಲ್ಲಿ ನೀನು ಬಾ, ನಡು ಊರಲ್ಲಿ ನಿನ್ನ ಪೂಜುತ್ತಾರೆ, ಕುರಿಕೋಳಿಗಳ ನಿನಗೆ ಕಡಿತಾರೆ ಎಂದು ಹೇಳುತ್ತಾನೆ. 'ಬ್ರಾಹ್ಮಣರ ಮನೆಯಲ್ಲಿ ಸೇರಿಕೋ, ವರ್ಷಕ್ಕೊಮ್ಮೆ ಗೌರಿಹಬ್ಬದಲ್ಲಿ ನೀನು ಬಾ, ಮಲ್ಲಿಗೆ ಹೂವಿನ ಪೂಜೆ ನಿನಗೆ ಮಾಡುತ್ತಾರೆ ಎಂದು ಗೌರಿಗೆ ಹೇಳಿಕಳಿಸುತ್ತಾನೆ. 'ನಿಮ್ಮಿಬ್ಬರ ಮಧ್ಯದಲ್ಲಿ ಶಿವರಾತ್ರಿ ಹಬ್ಬ, ಆ ಹಬ್ಬದಲ್ಲಿ ನಾ ಬರುತ್ತೀನಿ ಎಂದು ಶಿವ ಮೂವರಿಗೂ ಮೂರು ಹಬ್ಬ, ನಿಯಮಿಸುತ್ತಾನೆ.
Tuesday, 14 January 2020
ನಾನೀಗ ಬದಲಾಗಲೇಬೇಕು.
* ನನ್ನ ಬದುಕಿನಲ್ಲಿ ಬಂದ ಎಲ್ಲರನ್ನು ಪ್ರೀತಿಸಿದ ಅವಧಿ ಮುಗಿದಾಯ್ತು. ಈಗ ನನ್ನನ್ನು ಪ್ರೀತಿಸುವ ಸರತಿ ಬಂದಿದೆ.
* ಇಡೀ ಜಗತ್ತನ್ನು ನನ್ನ ಭುಜದ ಮೇಲೆ ಹೊರಲು ನಾನೇನು ಅಟ್ಲಾಸ್ ನಕ್ಷೆಯಲ್ಲ, ನನಗು ಮಿತಿಯಿದೆ.
* ಇತರರು ತಪ್ಪು ಮಾಡಬಹುದು. ಹಾಗೆಂದ್ ಮಾತ್ರಕ್ಕೆ ಅವರನ್ನು ತಿದ್ದುತ್ತಾ ಕೂರುವುದು ನನ್ನ ಕೆಲಸವಲ್ಲ ಎಂದು ಅರ್ಥವಾಗಿದೆ.
* ಎಲ್ಲರಲ್ಲೂ ಪರಿಪೂರ್ಣತೆ ಹುಡುಕುತ್ತಾ ಕುಳಿತುಕೊಳ್ಳುವ ಬದಲು ನೆಮ್ಮದಿಯತ್ತ ಮೊರೆ ಹೋಗುತ್ತೇನೆ. ನೆಮ್ಮದಿಯೆಂದರೆ ಪರಿಪೂರ್ಣತೆಗೆ ಮಿಗಿಲು.
* ಈಗ ಮೊದಲಿಗಿಂತ ಹೆಚ್ಚಾಗಿ ಒಳ್ಳೆಯದನ್ನು ಪ್ರಶಂಸಿಸಲು ಕಲಿತಿದ್ದೇನೆ. ಅದು ನನ್ನೆದುರಿನ ವ್ಯಕ್ತಿಯ ಚೈತನ್ಯವನ್ನು ಮಾತ್ರವಲ್ಲ, ನನ್ನ ಜೀವನೋತ್ಸಹವನ್ನು ಪುಷ್ಟಿಗೊಳಿಸುತ್ತಿದೆ.
* ನನ್ನ ಅಂಗಿ ಚೂರು ಹರಿದಿದ್ದರು ಅಥವಾ ಕಲೆಯಾಗಿದ್ದರು ಅದರ ಬಗ್ಗೆ ತಲೆ ಕೆಡಿಸಕೊಳುತ್ತಿಲ್ಲ ಅದೇನೇ ಆಗಲಿ ನನ್ನ ವ್ಯಕ್ತಿತ್ವ ಹೊರನೋಟಕ್ಕಿಂತ ಮಿಗಿಲು.
* ನನ್ನನ್ನು ಗೌರವಿಸದವರಿಂದ ಬಹುದೂರ ಉಳಿದು ಬಿಡುತ್ತೇನೆ. ನನಗೆ ನನ್ನ ಮೌಲ್ಯದ ಅರಿವುಳ್ಳಷ್ಟು ಅವರಿಗೆ ಎಲ್ಲಿ ಬರಬೇಕು ಅಲ್ಲವೇ?
* ನನ್ನನ್ನು ಹತ್ತಿಕ್ಕಲು ಬರುವವರ ಮುಂದೆ ಪ್ರಶಾಂತವಾಗಿ ವರ್ತಿಸುತ್ತೇನೆ. ಅವರೇ ಮುಂದೆ ಹೋಗಲಿ. ಅಷ್ಟಕ್ಕೂ ನಾನ್ಯಾವ ಓಟದ ಸ್ಪರ್ದಿಯಲ್ಲ.
* ನನ್ನದೇ ಭಾವನೆಗಳಿಂದ ನಾನು ಕಸಿವಿಸಿಗೊಳ್ಳುವುದನ್ನು ನಿಲ್ಲಿಸಿದ್ದೇನೆ. ಅಷ್ಟಕ್ಕೂ ಅವುಗಳಿಂದಲೇ ನಾನು ಮನುಷ್ಯವೆನ್ನಿಸಿಕೊಂಡಿರುವುದು.
* ಸಂಬಂಧಗಳೊಂದಿಗೆ ರಾಜಿಯಾಗುವುದನ್ನು ಕಲಿತಿದ್ದೇನೆ. ಅಷ್ಟಕ್ಕೂ ಸಂಬಂಧಗಳಿಗಿಂತ ನನ್ನ ಆಹಂಕಾರ ದೊಡ್ಡದೇನಲ್ಲ.
* ಈ ಕ್ಷಣದಲ್ಲಿ ಬದುಕುವುದನ್ನು ಕಲಿತಿದ್ದೇನೆ. ಯಾರಿಗೆ ಗೊತ್ತು? ಈ ಕ್ಷಣವೇ ನನ್ನ ಬದುಕಿನ ಅಂತಿಮ ಕ್ಷಣವಾಗಬಹುದು.
* ನನಗೆ ಸಂತೋಷ ಕೊಡುವುದನ್ನು ನಾನು ಮಾಡುತ್ತೇನೆ. ಇದು ನನ್ನ ಸಂತೋಷದ ಸರದಿ. ಅದಕ್ಕೆ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ. ಸಂತೋಷಕ್ಕೆ ನ್ಯಾಯ ಒದಗಿಸುವುದೆಂದರೆ, ನನಗೆ ನಾನು ನ್ಯಾಯ ಒದಗಿಸುವುದು ಅಂದರ್ಥ.
ಯಲ್ಲಪ್ಪ ನಂದಿ.










