Thursday, 20 February 2020

ಶಿವರಾತ್ರಿಯ ಮಹಿಮೆ



ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.

ಯುವರಾಜ ನಂದಿ









Sunday, 2 February 2020

ಜೀವನ


ಬದುಕೊಂದು ಸಾಗರವಾದರೆ ಅದರಾಚೆ ಕಾಣುವ ದಡವ ಮುಟ್ಟಬೇಕೆಂದು ಆಸೆಪಡುವ ಆಶಾವಾದಿಗಳೆ ನಾವು. ಈ ಓಟದಲ್ಲಿ ಪಡೆಯುವುದು ಏನಿಲ್ಲ, ಕಳೆದುಕೊಳ್ಳುವುದು ಏನಿಲ್ಲ. ಹಾಗಂತ ಓಟವನ್ನು ನಿಲ್ಲಿಸುವಂತೆಯೂ ಇಲ್ಲ. ಆದರೆ ದಡ ಸಮೀಪಿಸುತ್ತಿದ್ದಂತೆ ಉಳಿಯುವುದು ನೆನಪುಗಳು ಮಾತ್ರ ಅದರಲ್ಲಿ ಮನಸಿಗೆ ಹಿತ ನೀಡುವ ಸುಂದರ ಅಲೆಗಳು ಕೆಲವಾದರೆ, ಮುಳ್ಳುಗಳಂತೆ ಚುಚ್ಚಿ ಚುಚ್ಚಿ ಕೊಲ್ಲುವ ಭುಗಿಲೆದ್ದ ಸುನಾಮಿಗಳು ಹಲವು.

ಜೀವನವನ್ನು ಸಮುದ್ರಕ್ಕೆ ಹೋಲಿಸಲು ಕಾರಣ ಸಮುದ್ರ ನೋಡಲು ಎಷ್ಟು ಶಾಂತವೋ ಒಮ್ಮಿಂದೊಮ್ಮೆಲೆ ರುದ್ರತಾಂಡವನಂತೆ ನರ್ತಿಸುತ್ತದೆ, ಹಾಗೆ ಜೀವನವು ಕೂಡ ಒಮ್ಮೆ ಸುಂದರ ಶಾಂತವೆನಿಸಿದರೂ ಅನಿರೀಕ್ಷಿತ ತಿರುವುಗಳು ಬಂದು ಅಲ್ಲೋಲಕಲ್ಲೋಲ ಮಾಡಿಬಿಡುತ್ತವೆ. ಸಮುದ್ರದಿಂದ ನಾವು ಕಲಿಯುವ ಪಾಠವೆಂದರೆ ಯಾವುದು ಇಲ್ಲಿ ಶಾಶ್ವತವಲ್ಲ ಅಲೆಗಳಂತೆ ಸುಖ ದುಃಖಗಳು ಬಂದು ಹೋಗಿ ಬಂದು ಹೋಗಿ ಮಾಡುತ್ತಲೇ ಇರುತ್ತವೆ, ಆದರೆ ನಮ್ಮ ಮನಸ್ಸನ್ನು ಮಾತ್ರ ಸಂತೋಷದಿಂದ ಹಿಗ್ಗಲೂ ಬಿಡದೇ ದುಃಖದಿಂದ ಕುಗ್ಗಲೂ ಬಿಡದೇ ದಡದಲ್ಲಿರುವ ಮರಳಿನಂತೆ ಸ್ಥಿರವಾಗಿಟ್ಟುಕೊಂಡರೆ ಜೀವನದಲ್ಲಿ ಎಂತಹ ಸಂದರ್ಭವನ್ನಾದರೂ ಅನಾಯಾಸವಾಗಿ ಎದುರಿಸಿ ದಡವನ್ನು ಸೇರಬಹುದು.

ಯಲ್ಲಪ್ಪ ನಂದಿ 

Saturday, 1 February 2020

ಜೀವನವೊಂದು ಪುಸ್ತಕದಂತೆ


ಜೀವನವೊಂದು ಪುಸ್ತಕದಂತೆ
ಕೆಲವು ಅಧ್ಯಾಯ ದುಃಖದಿಂದಿದ್ದರೆ
ಕೆಲವು ಅಧ್ಯಾಯ ಸಂತಸದಿಂದಿರುತ್ತವೆ
ಸುಮಾರು ಉತ್ತೇಜಕವಾಗಿರುತ್ತವೆ
ಆದರೆ ನೀನು ಪುಟಗಳನ್ನೇ ತಿರುವದಿದ್ದರೆ
ನಿನಗೆಂದು ತಿಳಿಯದು ಮುಂದೇನಿದೆಯೆಂದು
ದುಃಖದಿಂದ ಕುಗ್ಗದೆ ಖುಷಿಯಿಂದ ಹಿಗ್ಗದೇ
ಪ್ರತೀ ಪುಟವೂ ನಿನ್ನದೇ ಎಂದು ನಡೆಸು ಜೀವನ
ಆಗ ನಿನ್ನ ಹುಟ್ಟಾಗುವುದು ಪಾವನ

ಯಲ್ಲಪ್ಪ ನಂದಿ

ಗಂಗೆ - ಗೌರಿ


ಸಂಸ್ಕೃತ ಸಾಹಿತ್ಯದಲ್ಲಿ ಹಾಗೂ ಕನ್ನಡ ಜನಪದ ಸಾಹಿತ್ಯದಲ್ಲಿ ಗಂಗೆ-ಗೌರಿಯರ ಪ್ರಸ್ತಾಪ ಎಷ್ಟು ರಮ್ಯವಾಗಿ ಬಂದಿದೆಯೆಂಬುದನ್ನು ಈ ಲೇಖನ ವಿವರಿಸುತ್ತದೆ.
ಪಾರ್ವತಿಯ ತಪೋನಿಷ್ಠೆಗೆ ಮನಸೋತ ಪರಮೇಶ್ವರ ಆಕೆಯನ್ನು ವಿವಾಹವಾದ ಬಳಿಕ ಪ್ರೀತಿಯಿಂದ ತನ್ನ ತೊಡೆಯ ಮೇಲೆ ಆಕೆಯನ್ನು ಕುಳ್ಳಿರಿಸಿಕೊಂಡು ಆಲಿಂಗಿಸಿ ಕೊಂಡನೆಂಬುದೂ ಭಗೀರಥನ ತಪಃಫಲವಾಗಿ ಗಂಗೆ ದೇವಲೋಕದಿಂದ ಭೂಮಿಗೆ ಧುಮುಕಲಾರಂಭಿಸಿದಾಗ ಆ ವೇಗವನ್ನು ತಾಳಲು ಭೂಮಿ ಅಸಮರ್ಥಳೆಂಬುದನ್ನು ಗ್ರಹಿಸಿದ ಶಿವ ದೃಢವಾಗಿ ನಿಂತು ಆಕೆಯನ್ನು ತನ್ನ ಜಟಾಕಲಾಪದೊಳಕ್ಕೆ ತಾಳಿಕೊಂಡನೆಂಬುದೂ ಪುರಾಣಪ್ರಸಿದ್ಧ ವಿಷಯ. ಗೌರಿ ಶಿವನ ಪತ್ನಿ ; ಶಿವನ ಎಡತೊಡೆ ಅವಳಿಗೆ ಆಸನ. ಗಂಗೆ ಪ್ರಾಸಂಗಿಕವಾಗಿ ಬಂದವಳು ; ಆದರೂ ಅವಳಿಗೆ ಶಿವನ ತಲೆಯ ಮೇಲೆ ಸ್ಥಾನ. ಶಿವನ ಪ್ರೇಮಕ್ಕಾಗಿ ಉಗ್ರವಾದ ತಪಸ್ಸುಮಾಡಿ ಅವನನ್ನು ವರಿಸಿ ಮದುವೆಯಾದ ಪತ್ನಿಗೆ ತನ್ನ ಸಮ್ಮುಖದಲ್ಲೇ ಈ ರೀತಿ ಅನ್ಯಸ್ತ್ರೀಯೊಬ್ಬಳು ತನ್ನ ಪತಿಯ ತಲೆಯ ಮೇಲೆ ಕುಳಿತುಕೊಳ್ಳುವಷ್ಟು ಸ್ವಾತಂತ್ರ್ಯ ಪಡೆಯುವುದು ಸಹ್ಯವಾದೀತೆ-ಎಂಬ ಸ್ತ್ರೀಸ್ವಭಾವದ ದೌರ್ಬಲ್ಯವನ್ನು ಆಧಾರವಾಗಿಟ್ಟುಕೊಂಡು ಕೆಲವು ಕವಿಗಳು ಕುಹಕವಾಗಿ, ಆಲಂಕಾರಿಕವಾಗಿ, ರಂಜನೀಯವಾಗಿ ಅನೇಕ ಶ್ಲೋಕಗಳನ್ನು ರಚಿಸಿದ್ದಾರೆ. ಒಬ್ಬ ಕವಿಯಂತೂ ಶಿವ ಸಂಸಾರದಲ್ಲಿ ಜುಗುಪ್ಸೆಗೊಂಡು ಹಾಲಾಹಲವನ್ನು ಕುಡಿಯಲು ಇತರ ಕೌಟುಂಬಿಕೆಗಳ ಕಲಹಗಳ ಜೊತೆಯಲ್ಲಿ, ಗೌರಿಗೆ ಗಂಗೆಯ ಮೇಲೆ ಉಂಟಾಗಿದ್ದ ಅಸೂಯೆಯೂ ಕಾರಣವಾಯಿತೆಂದು ಹೇಳಿರುವುದು ತುಂಬ ರಂಜಕವಾಗಿದೆ.
.....ಗೌರಿ ಜುಹ್ನುಸುತಾಮಸೂಯತಿ ; ಕಲಾನಾಥಂ ಕಪಾಲಾನಲ ಃ | ನಿರ್ವಿಣ್ಣ ಃ ಸ ಪಪೌ ಕುಟುಂಬಕಲಹಾದೀಶೋsಪಿ ಹಾಲಹಲಂ ||

ಕೊಂಕು ನುಡಿಗೆ ಪ್ರಸಿದ್ಧ ಉದಾಹರಣೆಯಾದ ವಿಶಾಖದತ್ತನ ಮುದ್ರಾರಾಕ್ಷಸ ನಾಟಕದ ನಾಂದೀ ಪದ್ಯದಲ್ಲೂ ಗೌರಿಗೆ ಗಂಗೆಯ ಮೇಲಿದ್ದ ಅಸೂಯೆ ಅಭಿವ್ಯಕ್ತವಾಗುತ್ತದೆ.
ಧನ್ಯ ಕೇಯಂ ಸ್ಥಿತಾ ತೇ ಶಿರಸಿ ? ಶಶಿಕಲಾ ; ಕಿಂ ನು ನಾಮೈತದಸ್ಯಾಃ ? ನಾಮೈವಾನ್ಯಾಸ್ತದೇತತ್ಪರಿಚಿತಮಪಿ ತೇ ವಿಸ್ಮøತಂ ಕಸ್ಯ ಹೇತೋಃ | ನಾರೀಂ ಪೃಚ್ಛಾಮಿ ನೇಂದುಂ ; ಕಥಯತು ವಿಜಯಾನ ಪ್ರಮಾಣಂ ಯದೀಂದು ಃ ದೇವ್ಯಾ ನಿಹ್ನೋತುಮಿಚ್ಛೋಃ ಇತಿ ಸುರಸರಿತಂ ಶಾಠ್ಯಮವ್ಯಾದ್ವಿಭೋರ್ವಃ ||
ಶಿವನ ತಲೆಯ ಮೇಲೆ ಸ್ಥಾನ ಪಡೆದಿರುವ ಗಂಗೆಯನ್ನು ನೋಡಿ ಗೌರಿ ತನ್ನಲ್ಲುಂಟಾದ ಅಸೂಯೆಯನ್ನು ಹೊರಗೆಡಹದೆ, ಚುಚ್ಚುನುಡಿಯಿಂದ ಶಿವನನ್ನೇ ಪ್ರಶ್ನಿಸುತ್ತಾಳೆ-ಧನ್ಯಾ ಕೇಯಂ ಸ್ಥಿತಾ ತೇ ಶಿರಸಿ?-ನಿನ್ನ ತಲೆಯ ಮೇಲೆ ಕುಳಿತಿರುವ ಧನ್ಯೆಯಾದ ಈಕೆ ಯಾರು? ಗೌರಿಯ ಅಸೂಯೆ ಅಸಹನೆಗಳನ್ನು ಮನಗಂಡ ಶಿವ, ಗಂಗೆ ತನ್ನ ಜಟಿಯಲ್ಲಿಲ್ಲವೇ ಇಲ್ಲವೋ ಎಂಬಂತೆ, ಗೌರಿ ಕೇಳಿದುದು ತನ್ನ ತಲೆಯ ಮೇಲಿರುವ ಚಂದ್ರಕಲೆಯನ್ನುದ್ದೇಶಿಸಿಯೇ ಎಂಬ ಭಾವಬರುವಂತೆ, ಉತ್ತರ ಹೇಳುತ್ತಾನೆ-ಶಶಿಕಲೆ ಎಂದು. ಗೌರಿ ಕೇಳುತ್ತಾಳೆ-ಶಶಿಕಲೆ ಎಂಬುದು ಆಕೆಯ ಹೆಸರೇನು ? ಶಿವ ಹೇಳುತ್ತಾನೆ-ಹೌದು ; ಅದು ಅವಳ ಹೆಸರೇ. ಈ ವಿಚಾರ ನಿನಗೆ ಪರಿಚಿತವಾದದ್ದೇ ಆದರೂ ಹೇಗೆ ಮರೆತುಹೋಯಿತು ? ಶಿವ ಮಾಡುತ್ತಿರುವ ಈ ಅಪಲಾಪ ಗೌರಿಗೆ ಅರ್ಥವಾಗಿ, ಅವಳು ಗಡಸು ಧ್ವನಿಯಲ್ಲಿ ಹೇಳುತ್ತಾಳೆ ನಾನು ಚಂದ್ರನನ್ನು (ಕುರಿತು) ಕೇಳುತ್ತಿಲ್ಲ ; ಹೆಂಗಸನ್ನು ಕುರಿತು ಕೇಳುತ್ತಿದ್ದೇನೆ. ಗೌರಿಯ ಈ ಮಾತಿನ ಅರ್ಥವನ್ನೂ ತಿರುವುಮುರುವು ಮಾಡಿ ಶಿವ ಹೇಳುತ್ತಾನೆ ಹಾಗಾದರೆ ಹೆಂಗಸಾದ (ನಿನ್ನ ಈ ಸಖಿ) ವಿಜಯಿಯೇ ಹೇಳಲಿ-ಇದು ಪ್ರಾಮಾಣಿಕವಾಗಿ ಚಂದ್ರನೇ ಅಲ್ಲವೇ ಎಂಬುದನ್ನು. ಈ ಪ್ರಕಾರವಾಗಿ ಗೌರೀದೇವಿಯಿಂದ ಗಂಗೆಯನ್ನು ಮರೆಯಿಸಬಯಸಿದ ಪರಶಿವನ ಶಾಠ್ಯ ನಿಮ್ಮನ್ನು ಸಲಹಲಿ-ಎಂದು ಕವಿ ಆಶಿಸುತ್ತಾನೆ.
ಇದೇ ಬಗೆಯ, ಆದರೆ ಬೇರೆ ಧಾಟಿಯ ಮತ್ತೊಂದು ಕುಹಕಪೂರ್ಣ ಶ್ಲೋಕದಲ್ಲಿ ಗಂಗೆಯ ಮೇಲೆ ಗೌರಿಗಿದ್ದ ಮಾತ್ಸರ್ಯ ಸ್ಟಷ್ಟವಾಗಿ ಮೂಡಿಬಂದಿದೆ. ಇಲ್ಲೂ ಶಿವ ತನ್ನ ತಲೆಯ ಮೇಲೆ ಗಂಗೆ ಎಂಬ ಯಾವ ಹೆಂಗಸೂ ಇಲ್ಲವೇ ಇಲ್ಲ ; ಅಲ್ಲಿರುವುದು ಬರೀ ನೀರು ಸ್ವಾರಸ್ಯವಾಗಿ ನಿರೂಪಿಸಿ ಗೌರಿಗೆ ತಿಳಿಯಹೇಳಿರುವ ರೀತಿ ಪ್ರತಿಭಾಸಂಪನ್ನವಾಗಿದೆ.
ಮೌಳೌ ಕಿಂನು ಮಹೇಶ ? ಮಾನಿನಿ, ಜಲಂ; ಕಿಂ ವಕ್ತ್ರಂ? ಅಂಭೋರುಹಂ;
ಕಿಂ, ನೀಲಾಲಕವೇಣಿಕಾ ? ಮಧುಕರಾಃ ಕಿಂ ಭ್ರೂಲತೇ ? ವೀಚಿಕಾಃ ; ಕಿಂ ನೇತ್ರೇ ? ಶಫರೀದ್ವಯಂ ; ಕಿಮು ಕುಚೌ ? ಪ್ರೇಂಖದ್ರಥಾಂಗದ್ವಯಂ
ಸಾಶಂಕಾಂ ಇತಿ ವಂಚಯನ್ ಗಿರಿಸುತಾಂ ಗಂಗಾಧರಃ ಪಾತು ವಃ ||
ಇಲ್ಲಿ ಗೌರಿ ಗಂಗೆಯ ಹೆಸರೆತ್ತದೆಯೇ ಅವಳ ಒಂದೊಂದು ಅವಯವವನ್ನೂ ನಿರ್ದೇಶಿಸಿ ಶಿವನನ್ನು ಪ್ರಶ್ನಿಸುವ ಧಾಟಿ ಗಂಭೀರವಾಗಿದೆ. ಅವಳು ಮೊದಲು ಕೇಳುತ್ತಾಳೆ-ಇದೇನು ನಿನ್ನ ತಲೆಯ ಮೇಲೆ, ಮಹೇಶ ? ಶಿವ ಹೇಳುತ್ತಾನೆ ನಿರ್ಲಿಪ್ತನಾಗಿ-ನೀರು, ಮಾನಿನಿ. ಇಲ್ಲಿ ಶಿವನಲ್ಲಿ ಏನನ್ನೂ ಮರೆಮಾಚುವ ಪ್ರಸಕ್ತಿಯೇ ಇಲ್ಲ. ಅವನಿಗೆ ಗಂಗೇ ಬರೀ ನೀರು ಅಥವಾ ನದಿ. ಗೌರಿ ದೃಷ್ಟಿಯಲ್ಲಿ ಗಂಗೆ ಒಬ್ಬ ರೂಪವತಿಯಾದ ಹೆಂಗಸು. ಆದ್ದರಿಂದಲೇ ಅವಳಿಗೆ ಅಸಹನೆ, ಅಸೂಯೆ. ಶಿವನ ಸಲೀಸಾದ ಉತ್ತರ ಕೇಳಿ ಅವಳು ಪುನಃ ಪ್ರಶ್ನಿಸುತ್ತಾಳೆ-(ಈ) ಮುಖವೋ ? ಅದು ಕಮಲ. ಈ ನೀಲಕೇಶಗಳ ಜಡೆಯೋ? ಅವು ದುಂಬಿಗಳ ಸಾಲು. ಈ ಎರಡು ಹುಬ್ಬುಗಳು ? ಅವು ಅಲೆಗಳು. ಆ ಎರಡು ಕಣ್ಣುಗಳೊ ? ಅವು ಎರಡು ಮೀನುಗಳು ಜೋಡಿ. ಆ ಎರಡು ಸ್ತನಗಳು ? ಅವು ತೂಗಾಡುತ್ತಿರುವ ಚಕ್ರವಾಹಕಗಳು! ಆಶಂಕಗೊಂಡ ಗೌರಿಯನ್ನು ಈ ರೀತಿ ವಂಚಿಸುತ್ತಿರುವ ಗಂಗಾಧರ ನಿಮ್ಮನ್ನು ಸಲಹಲಿ.
ಇದೇ ಬಗೆಯ ಮತ್ತೂ ಒಂದು ಶ್ಲೋಕದ ವಸ್ತುವೂ ಗೌರಿಯ ಅಸೂಯೆಯೇ ಆಗಿದೆ. ಏಷಾ ತೇ ಹರ! ಕಾ ಸಗಾತ್ರಿ ? ಕತಮಾ ? ಮೂಧ್ರ್ನಿ ಸ್ಥಿತಾ; ಕಿಂ ಜಟಾ ? ಹಂಸಃ ಕಿಂ ಭಜತೇ ಜಟಾಂ? ನಹಿ, ಶಶೀ; ಚಂದ್ರೋಜಲಂ ಸೇವತೇ ? ಮುಗ್ಧೇ! ಭೂತಿರಿಯಂ; ಕುತ್ರೋತ್ರ ಸಲಿಲಂ ? ಭೂತಿಸ್ತರಂಗಾಯತೇ ಏವಂ ಯೋ ವಿನಿಗೂಯತೇ ತ್ರಿಪಥಗಾಂ ಪಾಯತ್ಸವಃ ಶಂಕರ ||
ಮೇಲಿನ ಶ್ಲೋಕಗಳು ಸಂವಾದರೂಪದಲ್ಲಿದ್ದರೆ ಮುಂದಿನ ಶ್ಲೋಕದಲ್ಲಿ ಗಂಗೆಯನ್ನು ತನ್ನ ತಲೆಯಮೇಲಿರಿಸಿಕೊಂಡಿರುವ ಶಿವನನ್ನು ಗೌರಿ ನೇರವಾಗಿಯೇ ಕೋಪದಿಂದ ತರಾಟೆಗೆ ತೆಗೆದುಕೊಳ್ಳುವುದನ್ನು ಕಾಣಬಹುದು.
ಸಂಪ್ರಾಪ್ತಂ ಮಕರಧ್ವಜೇನ ಮಥನಂ ತ್ವತ್ತೋಮದರ್ಥೇ ಪುರಾ ತದ್ಯುಕ್ತಂ ಬಹುಮಾರ್ಗಗಾಂ ಮಮ ಪುರೋ ನಿರ್ಲಜ್ಜ ವೋಢುಸ್ತವ ? ತಾಮೇನಾಮನುಯಸ್ವ ಭಾವಕುಟಿಲಾಂ ; ಹೇ ಕೃಷ್ಣಕಂಠ ! ಗ್ರಹಂ ಮುಂಚೇತ್ಯಾಹ ರುಷಾ ಯಮದ್ರಿತನಯಾ (ಲಕ್ಷ್ಮೀಶ್ಚ) ಪಾಯತ್ಸ ವಃ ||
ಹಿಂದೆ ನನಗಾಗಿ ಮನ್ಮಥನೂ ನಿನ್ನ ದೆಸಿಯಿಂದ ಕಷ್ಟಕ್ಕೀಡಾದ. ಹಾಗಿರುವಾಗ ಎಲೌ ಲಜ್ಜೆಯಿಲ್ಲದವನೆ ! ನನ್ನ ಮುಂದೆಯೇ ಗಂಗೆಯನ್ನು ತಲೆಯ ಮೇಲೆ ಹೊತ್ತುಕೊಂಡಿರುವೆಯಲ್ಲ, ಇದು ನಿನಗೆ ತರವೇ ? ಕುಟಿಲ ಪ್ರೇಮದ ಅವಳ ಅನುನಯವನ್ನೇ ಮಾಡು ಓ ನೀಲಕಂಠ ! ಬಿಡು ನನ್ನ ಆಲಿಂಗವನ್ನು-ಎಂಬುದಾಗಿ ಗೌರಿ ಕೋಪದಿಂದ ಯಾವನನ್ನುದ್ದೇಶಿಸಿ ನುಡಿದಳೋ ಆ ಶಿವ ನಿಮ್ಮನ್ನು ಸಲಹಲಿ.
ಈ ಎಲ್ಲ ಶ್ಲೋಕಗಳೂ ಆಶೀರ್ವಚನರೂಪವಾದ ಮಂಗಳಶ್ಲೋಕಗಳೆಂಬುದನ್ನು ಗಮನಿಸಬೇಕು. ಗೌರಿಯ ಅಸಹನೆ ಅಸೂಯೆಗಳು ಕವಿಗಳಿಂದ ಆರೋಪಿತವಾದುವೇ ವಿನಾ ವಾಸ್ತುವಿಕವಲ್ಲ. ಗಂಗೆ-ಗೌರಿ ಇಬ್ಬರೂ ಸತ್ತ್ವಪ್ರಧಾನರು; ದೈವೀಸಂಪತ್ತಿಯಿಂದ ಕೂಡಿದ ಮಹಾನುಭಾವೆಯರು, ಜಗದ್ವಂದ್ಯೆಯರು. (ಎಸ್.ಆರ್.ಎಎನ್.)
ಗಂಗೆಗೌರಿಯರ ಚಿತ್ರಗಳು ಕಾವ್ಯಪುರಾಣಗಳಲ್ಲಿಗಿಂತ ಹೆಚ್ಚು ಯಶಸ್ವಿಯಾಗಿ ಜನಪದ ಸಾಹಿತ್ಯದಲ್ಲಿ ಕಾಣಸಿಗುತ್ತವೆ. ಈ ಯಶಸ್ಸಿಗೆ ಕಾರಣ, ಬಹುಶಃ, ಇಲ್ಲಿ ಅವರೂ ಜನಪದರಾಗಿಯೇ ಕಾಣಿಸಿಕೊಳ್ಳುವುದಾಗಿರಬಹುದು. ಜನಪದ ಸಾಹಿತ್ಯದಲ್ಲಿ ಗಂಗೆಗೌರಿಯ ಸಂಬಂಧದ ಬಗ್ಗೆ ಅನೇಕ ಪಾಠಾಂತರಗಳು ಸಿಕ್ಕುತ್ತವೆ. ಅವುಗಳಲ್ಲಿ ಮುಖ್ಯವಾದ ಪಾಠಾಂತರಗಳ ಆಧಾರದಮೇಲೆ ಆ ಇಬ್ಬರ ಕೆಲವು ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ.
ನೀಲಮ್ಮ ಮೀಯುವಾಗ ನೀರಿನಲ್ಲಿ ಮಲ್ಲಯ್ಯನ ಕಳಸವನ್ನು ಕಾಣುತ್ತಾಳೆ. ಸ್ನಾನಮಾಡಿ ಮಲಗಿದಮೇಲೆ ಅವಳಿಗೆ ಒಂದು ಕನಸು ಬೀಳುತ್ತದೆ. ಮಲ್ಲಯ್ಯ ಕನಸಿನಲ್ಲಿ ಕಾಣಿಸಿಕೊಂಡು ಕನ್ನೆಯರು ಹುಟ್ಟಿದರೆ ತನಗೆ ಕೊಡುವಂತೆ ಕೇಳುತ್ತಾನೆ. ಕನಸೊಡೆದು ಎದ್ದ ಆಕೆ ಹೆಣ್ಣು ಹುಟ್ಟಿದರೆ ಲಿಂಗಕ್ಕೆ ಸಂತೋಷದಿಂದ ಧಾರೆ ಎರೆದೇನೆಂದು ಹಿಗ್ಗುತ್ತಾಳೆ. ಅದರಂತೆ ಅವಳಲ್ಲಿ ಗಿರಿಜೆ ಹುಟ್ಟುತ್ತಾಳೆ. ಅದನ್ನು ತಿಳಿದ ಗಿರಿಯ ಮಲ್ಲಯ್ಯ ಬೆಟ್ಟದಷ್ಟು ಹೊನ್ನನ್ನು ಹೊರಿಸಿಕೊಂಡು ಅವಳನ್ನು ಕೇಳಲು ಬರುತ್ತಾನೆ. ಮಲ್ಲಯ್ಯನ ಮುಂದೆ ಬಣ್ಣದ ಹಚ್ಚಡದ ಬಸವಯ್ಯ ಬಂದು ನಮ್ಮ ಮಠಕ್ಕೆ ಹೆಣ್ಣನ್ನು ಕೊಡಿ ಎಂದು ಕೇಳುತ್ತಾನೆ. ಮಲ್ಲಯ್ಯನ ಬೈರಾಗಿಬಾಳನ್ನು ಗಿರಿಜೆಯ ತಂದೆತಾಯಿಯರು ಜರಿಯುತ್ತಾರೆ. ಅದರಿಂದ ಗಿರಿಜೆಗೆ ದುಃಖವಾಗುತ್ತದೆ. ಮಲ್ಲಯ್ಯನ ಕಷ್ಟಕರ ಜೀವನವನ್ನು ತಾಯಿ ವಿವರಿಸುತ್ತಾಳೆ. ಗಿರಿಜೆ ಎಲ್ಲ ತ್ಯಾಗಕ್ಕೂ ಸಿದ್ಧಳಾಗುತ್ತಾಳೆ. ಕೋಪಗೊಂಡ ತಂದೆತಾಯಿಯರು ಅವಳನ್ನು ಹೊರಗೆ ತಳ್ಳಿಬಿಡುವುದಾಗಿ ಹೆದರಿಸುತ್ತಾರೆ. ಅತ್ತ ಮಲ್ಲಯ್ಯ ಗಿರಿಜೆಯ ಯೋಚನೆಯಲ್ಲಿಯೇ ಮಲಗಿದ್ದು ಅವಳನ್ನು ಗೆದ್ದು ತರಲು ಮತ್ತೆ ಹೊರಡುತ್ತಾನೆ. ಜಂಗಮನ ವೇಷದಲ್ಲಿ ಬಂದ ಅವನು ಕೆರೆಯಲ್ಲಿ ನೀರು ಮೊಗೆಯತ್ತಿದ್ದ ಗಿರಿಜೆಯನ್ನು ಕಾಣುತ್ತಾನೆ. ಅ ಚಲುವೆಯನ್ನು ಕಂಡು ತನ್ನ ಜಪವನ್ನೇ ಮರೆತು ಬಿಡುತ್ತಾನೆ. ಅವರಿಬ್ಬರಲ್ಲಿ. ಸರಸ ಸಂಭಾಷಣೆ ನಡೆದು ಪ್ರೇಮಾಂಕುರವಾಗುತ್ತದೆ. ಅವಳನ್ನು ಕೊಡಲು ತಂದೆತಾಯಿಯರೂ ಒಪ್ಪುತ್ತಾರೆ. ಮದುವೆ ವಿಜೃಂಭಣೆಯಿಂದ ನಡೆಯುತ್ತದೆ.
ಇನ್ನೊಂದು ಪಾಠಾಂತರ ಹೀಗಿದೆ : ಭೋಲೋಕದಲ್ಲಿ ಗೌರಿಯ ಅವತಾರವದ ಮೇಲೆ ಸುಂದರ ಯುವತಿಯಾಗಿ ಅವಳನ್ನು ಯಾರಿಗೆ ಕೊಡಬೇಕೆಂಬುದು ತಂದೆತಾಯಿಗಳಿಗೆ ದೊಡ್ಡ ಸಮಸ್ಯೆಯಾಗಿಹೊಯಿತು. ಯಾವ ವರನನ್ನೂ ಅವಳು ಒಪ್ಪದೆ ನಿರಾಶೆಯನ್ನುಂಟುಮಾಡಿದಳು. ಯಾರಿಗೆ ಕೊಡಲಿ ಎಂದು ತಂದೆ ಮಗಳನ್ನೇ ಕೇಳುತ್ತಾನೆ. ಬ್ರಾಹ್ಮಣನಿಗೆ ಕೊಡಲೆ ಎಂದರೆ ಅವರ ಕಟ್ಟುನಿಟ್ಟಾದ ಜೀವನ ತನಗೆ ಒಗ್ಗದೆಂದು ಹೇಳಿ ನಿರಾಕರಿಸುತ್ತಾಳೆ. ಹೀಗೆಯೇ ಶಿವಭಕ್ತರು, ಕೋಮಟಿಗರು, ಒಕ್ಕಲಿಗರು, ತುರುಕರು, ಕುಂಬಾರರು, ಕುರುಬರು, ನಾಯ್ಕರು, ಗೊಲ್ಲರು ಮುಂತಾದ ವಿವಿಧ ಜಾತಿಯ ವಿವಿಧ ಕಸಬಿನವರನ್ನು ಸೂಚಿಸಿದರೂ ಹಲವು ಕಾರಣಗಳನ್ನು ಹೇಳಿ ಬೇಡವೆನ್ನುತ್ತಾಳೆ. ಕೊನೆಗೆ ಶಿವಗಂಗೆಯ ಸಂನ್ಯಾಸಿ ಮಠದಲ್ಲಿರುವ ಜಂಗಮನಿಗೆ ಕೊಟ್ಟು ಲಗ್ನ ಮಾಡಬಹುದೆಂದು ಮಗಳು ತಿಳಿಸಲು ಅದನ್ನು ಕೇಳಿದ ತಂದೆತಾಯಿಯರು ವಿಸ್ಮಯಗೊಳ್ಳುತ್ತಾರೆ. ಜಂಗಮಜೀವನದ ಅಸಹ್ಯವಾದ ಸ್ಥಿತಿಯನ್ನು ವಿವರಿಸುತ್ತಾರೆ. ಆದರೂ ಅವಳು ಕೇಳುವುದಿಲ್ಲ. ಕೋಪಗೊಂಡ ಅವರು ಈಕೆ ನಮ್ಮ ಘನತೆಯನ್ನು ಹಾಳುಮಾಡುವ ಹೆಣ್ಣು ಎಂದುಕೊಂಡು ಕಣ್ಣು ಕಟ್ಟಿ ಕಾಡಿಗೆ ಬಿಡುತ್ತಾರೆ. ಅಲ್ಲಿ ಗೌರಮ್ಮ ಹನ್ನೆರಡು ಬೆಟ್ಟದ ನಡುವೆ ಕುಳಿತು ಶಿವನನ್ನು ಕುರಿತು ತಪಸ್ಸು ಮಾಡುತ್ತಾಳೆ. ಶಿವ ಮುದಿಜಂಗಮನ ವೇಷ ಧರಿಸಿ ಜೋಳಿಗೆ ಹಿಡಿದು ಭಿಕ್ಷೆಗೆ ಬರುತ್ತಾನೆ. ಕಾಡಿನಲ್ಲಿ ಅವಳೇನನ್ನು ಕೊಟ್ಟಾಳು ? ಕೊನೆಗೆ ಶಿವ ತನ್ನ ನಿಜರೂಪವನ್ನು ತೋರಿ ಅವಳನ್ನು ತನ್ನೊಂದಿಗೆ ಮಠಕ್ಕೆ ಕರೆದುಕೊಂಡು ಹೋಗಿ ಅವಳ ತಂದೆತಾಯಿಗಳನ್ನು ಕರೆಸಿ ವಿಜೃಂಭಣೆಯಿಂದ ಮದುವೆ ಮಾಡಿಕೊಳ್ಳುತ್ತಾನೆ. ಜನಪದ ಸಾಹಿತ್ಯದಲ್ಲಿ ಗಂಗೆ ಕಾಣಿಸಿಕೊಳ್ಳುವುದು ಹೀಗೆ:
ಉಂಡುಟ್ಟು ಮಂಚದ ಮೇಲೆ ಮಲಗಿದ ಗಿರಿಮಾಜೆಗೆ ಕನಸಿನಲ್ಲಿ ಶಿವ ಕಾಣಿಸಿ ಗರ್ಭಿಣಿಯಾದ ಅವಳೊಡಲಲ್ಲಿ ಹೆಣ್ಣುಮಕ್ಕಳು ಹುಟ್ಟಿದರೆ ತನಗೆ ಕೊಡುವಂತೆ ಕೇಳುತ್ತಾನೆ. ಗಿರಿಮಾಜೆಗೆ ನವಮಾಸಗಳು ತುಂಬಿ ದಿನ ಹತ್ತಿರವಾಗಲು ಪತಿ ಗಿರಿರಾಯ ಸೂಲಗಿತ್ತಿ ಸಂಗಮ್ಮನನ್ನು ಹುಡುಕಿ ಕರೆತರುತ್ತಾನೆ. ಎರಡು ಹೆಣ್ಣುಮಕ್ಕಳು ಜನಿಸುತ್ತವೆ. ಆದರೆ ಹಿರಿಯ ಹೆಣ್ಣು ಹುಟ್ಟಿದ ಗಳಿಗೆಯಲ್ಲಿ. ಶಕುನ ಸರಿತೋರದೆ ಹುಟ್ಟಿದ ಮನೆಗೆ ಅವಳು ಕಂಟಕಪ್ರಾಯಳಾಗುವಳೆಂದು ಸಂಗಮ್ಮನೂ ಪುರೋಹಿತರೂ ಹೇಳಿದ ಮೇಲೆ ತೊಟ್ಟಿಲ ಸಮೇತ ಹೊಳೆಗೆ ಬಿಟ್ಟು ಬರುತ್ತಾನೆ, ಗಿರಿರಾಯ. ಮೀನು ಹಿಡಿಯುವಾಗ ಅಂಬಿಗರ ಗಂಗನಿಗೆ ಆ ಮಗು ಸಿಕ್ಕುತ್ತದೆ. ಹೀಗೆ ಗಂಗೆ ಅಂಬಿಗರ ಮನೆಯಲ್ಲಿ ಬೆಳದು ದೊಡ್ಡವಳಾಗುತ್ತಾಳೆ.
ಜನಪದ ಸಾಹಿತ್ಯದಲ್ಲಿ ಗಂಗೆಗೌರಿಯರ ಜಗಳ ಒಂದು ಅತಿ ಮೋಜಿನ ಪ್ರಸಂಗವೆನಿಸಿದೆ. ಈ ಜಗಳದಲ್ಲಿ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಂಡುಬರುವ ಇಬ್ಬರು ಹೆಂಗಸರ ಜಗಳ, ಸವತಿಮಾತ್ಸರ್ಯಗಳು ಪ್ರತಿಬಿಂಬಿತವಾಗಿವೆ.
 ಗಂಗೆಯನ್ನು ತರುವ ಪೂರ್ವದಲ್ಲಿಯೇ ಗೌರಿಯ ಮುನಿಸು ಪ್ರಾರಂಭವಾಗುತ್ತದೆ. ತೊಳತೊಳತೊಳಗುತ್ತಿರುವ ಗಂಗೆಯನ್ನು ಸ್ವಪ್ನದಲ್ಲಿ ಕಂಡ ಶಿವ ಪಕ್ಕದಲ್ಲಿ ಮಲಗಿದ್ದ ಗೌರಿಗೆ ಹೇಳುತ್ತಾನೆ. ಅವನು ಯಾಕೆ ಹೇಳುತ್ತಿದ್ದಾನೆಂದು ಅವಳಿಗೆ ಅರ್ಥವಾಗುತ್ತದೆ. `ಮಕ್ಕಾಳಿರ್ಲೇಳಿ ಮನೆತುಂಬ ಎಂದು ವ್ಯಂಗ್ಯವಾಗಿ ನುಡಿದು ಮಗ್ಗುಲಾಗುತ್ತಾಳೆ. ಆದರೆ ಮರುದಿನ ಶಿವ ವೇಷಧರಿಸಿ ಹೊರಟೇಬಿಡುತ್ತಾನೆ. ಭೋಲೊಕಕ್ಕೆ ಬಂದ ಶಿವ ನೀರನ್ನು ಮೊಗೆಯುತ್ತಿರವ ಗಂಗೆಯನ್ನು ಕಂಡು ಜಪಮಾಡುತ್ತಿರುವಂತೆ ತಾನು ನಟಿಸುತ್ತಿದ್ದೇನೆಂಬುದನ್ನೂ ಮರೆಯುತ್ತಾನೆ. ಇವನ ಸ್ಥಿತಿಯನ್ನು ಕಂಡ ಗಂಗೆ 'ಜಪವ ಮರಿಸವ್ರ ಮಗಳಲ್ಲ ಎಂದು ಹಾಸ್ಯ ಮಾಡುತ್ತಾಳೆ. ಹಾಸ್ಯಕ್ಕಿಂತ ಹೆಚ್ಚಾಗಿ ಇಲ್ಲಿ ನಾನು ಬಡವರ ಮನೆಯ ಹುಡುಗಿ ಎಂಬ ದ್ಯೆನ್ಯದ ಭಾವ ಎದ್ದುಕಾಣುತ್ತದೆ. ಶಿವ ಗಂಗೆಯನ್ನು ತರುತ್ತಿರುವ ಸುದ್ದಿಯನ್ನು ಗಿಣಿರಾಮನಿಂದ ತಿಳಿದು ಗೌರಿ ಅಪ್ಪನ ಮನೆಗೆ ಹೊರಡುತ್ತಾಳೆ. ಅವರು ಬರುವ ಹೊತ್ತಿಗೆ ರಾಡ್ಮುಂಡ್ಗೆ (ಮಂಡಿಗದ್ದಗಳನ್ನು ಸೇರಿಸಿ ಮಲಗುವುದು) ಹಾಕಿ ಮಲಗು ಹೋಗು ಎಂದು ಅಪ್ಪ ಬುದ್ಧಿ ಹೇಳಿ ಕಳಿಸುತ್ತಾನೆ. ಕದ ತೆಗೆಯದೆ ಮಲಗಿದ್ದ ಗೌರಿಯನ್ನು ಹೆದರಿಸಿ ಕದ ತೆಗೆಸುತ್ತಾನೆ. ಶಿವ. ಗೌರಿ ಊಟಕ್ಕೆ ಎರಡು ಮಣೆಗಳನ್ನು ಹಾಕುತ್ತಾಳೆ. ಇಬ್ಬರುಂಟೇನೆ ಪುರಷ್ಯರು ?' ಎಂದು ಕೇಳಿದ ಶಿವನಿಗೆ 'ಸಿವ್ನ ಕೆಂಜಡೆಯ ಮುಡಿವಳಗೆ ಇರುವ ಸಿವ್ಗಂಗೇಗೆ ಒಂದು, ನಿಮಗೊಂದು ಎಂದು ಉತ್ತರಿಸುತ್ತಾಳೆ. ಶಿವ ಅಪ್ರತಿಭನಾಗುತ್ತಾನೆ. ಅನಂತರ ಗೌರಿ ಗಂಗೆಗೆ ಹರಸುತ್ತ 'ಅಂಬುಗನ ಮಗಳೆ ಸುಕುಬಾಳೊ ಎನ್ನುತ್ತಾಳೆ. ಅಂಬಿಗನ ಮಗಳು ಎಂದು ಕರೆದಳಲ್ಲ ಎಂದು ಗಂಗೆಗೆ ಚುರುಕಾಗುತ್ತದೆ. 'ಕೆಂಪೇರ ಜಗಳ ಶಂಖ ಬಾರಿಸಿದ್ಹಂಗ ಮೊದಲಾಗುತ್ತದೆ. ಜಗಳ. ಆಗಾಗ ಇಂಥ ಸಣ್ಣಪುಟ್ಟ ಜಗಳಗಳು ಇದ್ದೇ ಇರುತ್ತವೆ. ಹೀಗೇ ಇರುವಾಗ ಒಮ್ಮೆ ತಾನು ಮುಡಿದು ಮಿಕ್ಕಿದ ಹೊವನ್ನು ಗೌರಿ ಗಂಗೆಗೆ ಕಳಿಸುತ್ತಾಳೆ. ಒಳ್ಳೊಳ್ಳೆ ಹೂವನ್ನೆಲ್ಲ ತಾನು ಮುಡಿದು ಬಾಡಿಬತ್ತಿದ ಹೂವನ್ನು ಕಳಿಸಿದ್ದಾಳೆ ಎಂದುಕೊಂಡು ಗಂಗೆ ಅವನ್ನು ಬೀದಿಗೆ ಚೆಲ್ಲುತ್ತಾಳೆ, ಬೇಲಿಗೆ ಎಸೆಯುತ್ತಾಳೆ. ಇದನ್ನೆಲ್ಲ. ತಿಳಿದ ಗೌರಿ, ಗಂಗೆ ಬೆಸ್ತರ ಹುಡುಗಿಯೆಂದೂ ಅವಳ ತಂದೆ ಅಣ್ಣಂದಿರು ಮೀನು ಸೀಗಡಿ ಮಾರುವವರೆಂದೂ ಅವಳ ಬಂಧು ಬಳಗ ಸುಣ್ಣ ಸುಡುವವರೆಂದೂ ಜರೆಯುತ್ತಾಳೆ. ಸರಿ, ಪರಸ್ಪರ ಜಡೆ ಹಿಡಿದು ಜಗಳ ಪ್ರಾರಂಭಿಸುತ್ತಾರೆ. ಕುಸ್ತಿಯಲ್ಲಿ ಗಂಗೆ ಕೆಳಗೆ, ಗೌರಿ ಮೇಲೆ. ಜಗಳ ನಡೆಯುತ್ತಿದ್ದಾಗ ಗೌರಿ ಹೊರಗಾಗುತ್ತಾಳೆ. ಮಳೆದೇವರು ಗಾಳಿದೇವರುಗಳನ್ನು ಕರೆದು ಗಂಗೆ ಆಣೆ ಭಾಷೆ ತೆಗೆದುಕೊಳ್ಳುತ್ತಾಳೆ. ಭೂಮಿಯ ಮೇಲಿನ ನೀರನ್ನೆಲ್ಲ. ಮಾಯ ಮಾಡುತ್ತಾಳೆ. ಗೌರಿ ನೀರನ್ನು ತರಲು ಮಗನಾದ ಚೆನ್ನ ವೀರನನ್ನು ಕಳಿಸುತ್ತಾಳೆ. ಹುಡುಕಿ ಹುಡುಕಿ ಸಾಕಾದ ಅವನನ್ನು ಕಾಶಿಗೆ ಹೋಗು ಎನ್ನುತ್ತಾಳೆ, ಗೌರಿ. ಕಾಶಿಯಲ್ಲೂ ನೀರಿಲ್ಲ. ಅಲ್ಲಿಂದ ಬಳಲಿ ಬರುವಾಗ ಗಂಗೆ ನೋಡುತ್ತಾಳೆ. ಅಲ್ಲೊಂದು ಹಳ್ಳವನ್ನು ಸೃಷ್ಟಿಮಾಡುತ್ತಾಳೆ. ಆ ಹಳ್ಳದಲ್ಲಿ ಮನ ದಣಿಯ ನೀರು ಕುಡಿದು ಸ್ನಾನಮಾಡಿ ಬುತ್ತಿ ಬಿಚ್ಚುತ್ತಾನೆ ವೀರಣ್ಣ. ಎರಡು ಪಾಲುಮಾಡಿ ಚಿಕ್ಕವ್ವನಾದ ಗಂಗೆಗೆ ಒಂದು ಪಾಲನ್ನು ಬಿಟ್ಟು ಉಳಿದದ್ದನ್ನು ತಾನು ಉಣ್ಣುತ್ತಾನೆ. ಆಮೇಲೆ ಹನ್ನೆರಡು ಕಂಬ ಅಡ್ಡೆ ನೀರು ಮೊಗೆದು ಹೆಗಲಮೇಲೆ ಹೊತ್ತು ಮೂರು ಹೆಜ್ಜೆ ಹೋಗುವಷ್ಟರಲ್ಲಿ ಸವತಿ ಗೌರಿಗೆ ನೀರು ಹೋಗುತ್ತಿದೆ ಎಂದು ತಿಳಿದ ಗಂಗೆ ಹಳ್ಳದಲ್ಲಿದ್ದ ಮತ್ತು ಅಡ್ಡೆಯಲ್ಲಿದ್ದ ನೀರನ್ನೆಲ್ಲ ಮಾಯ ಮಾಡುತ್ತಾಳೆ. ಇದು ಗಂಗೆಯ ಮಾಯ ಎಂದು ಅವನಿಗೆ ತಿಳಿದುಹೋಗುತ್ತದೆ. ಮೂವತ್ತು ದಿನದಿಂದ ಊಟ ಇಲ್ಲದೆ ಗೌರಿ ಬಳಲುತ್ತಿದ್ದು ಕೈಲಾಸಗಿರಿಯಲ್ಲಿರುವ ಶಿವನ ಬಳಿಗೆ ಮಗನನ್ನು ಕಳಿಸುತ್ತಾಳೆ. ಶಿವನಿಗೆ ಜಗಳದ ವಿಷಯವನ್ನು ಹೇಳುತ್ತಾನೆ, ವೀರಣ್ಣ. ಶಿವ ಬರುತ್ತಾನೆ. ಗೌರಿ ಹೊರಗೆ ಕೂತಿದ್ದಾಳೆ. ಹಾಲುಮೊಸರು ತುಪ್ಪ ಜೇನುಗಳ ಅಡ್ಡೆಯನ್ನು ತರಲೇ ಎಂದು ಕೇಳುತ್ತಾನೆ ಯಾವುದರಿಂದಲೂ ತನ್ನ ಸೂತಕ ಕಳೆಯುವುದಿಲ್ಲ ಎನ್ನುತ್ತಾಳೆ. ಗಂಗೆಯ ಬಳಿಗೆ ಹೋಗು ಎನ್ನುತ್ತಾನೆ. ಸತ್ತರೂ ಆಕೆಯ ಬಳಿಗೆ ಹೋಗಲಾರೆ ಎನ್ನುತ್ತಾಳೆ. ವಿಧಿಯಿಲ್ಲದೆ ಮಗನನ್ನು ಕಳಿಸುತ್ತಾಳೆ. ನಿನಗೆ ಬೇಕಾದರೆ ಒಂದು ಚೆಂಬು ಕೊಡುತ್ತೇನೆ, ನಿನ್ನವ್ವನಿಗೆ ಇಲ್ಲ, ಎನ್ನುತ್ತಾಳೆ ಗಂಗೆ. ನಮ್ಮ ಬಾವಿಯಲ್ಲಿ ಕಪ್ಪೆ ಇರುತ್ತವೆ. ಅದು ಕಲಕುನೀರು, ಮೀನು ಇರುತ್ತವೆ. ಅದು ಹೊಲಸುನೀರು-ಎಂದು ಕಟಕಿಯಾಡಿದ ಮೇಲೆ ಬರಿಗೈಯಲ್ಲಿ ಹಿಂತಿರುಗುತ್ತಾನೆ, ವೀರಣ್ಣ. ಪೆಟ್ಟಿಗೆಯಲ್ಲಿದ್ದ ಪಟ್ಟೆಸೀರೆ ಉಟ್ಟುಕೊಂಡು ಆಭರಣಗಳನ್ನೆಲ್ಲ ಧರಿಸಿಕೊಂಡು ಐದು ಜನ ಮಕ್ಕಳನ್ನು ಕರೆದುಕೊಂಡು ಗೌರಿಯೇ ಹೊರಡುತ್ತಾಳೆ. ಎಷ್ಟು ಕೂಗಿದರೂ ಗಂಗೆ ಬಾಗಿಲು ತೆಗೆಯುವುದಿಲ್ಲ. ಉಟ್ಟಿದ್ದ ಪಟ್ಟೆಸೀರೆ ಆಭರಣಗಳು ಐದು ಜನ ಮಕ್ಕಳು-ಏನು ಬೇಕಾದರೂ ಕೊಡುವೆನೆಂದರೂ ಉತ್ತರ ಬರುವುದಿಲ್ಲ. ಕೊನೆಗೆ ನನ್ನ ಭಾಗದ ಗಂಡನನ್ನು ಕೊಡುತ್ತೇನೆ ಎಂದಾಗ, ಹಾಲು ಅನ್ನ ಮುಟ್ಟಿ ಭಾಷೆ ಮಾಡಿಸಿಕೊಂಡು, ಗಂಗಮ್ಮ ಬಾಗಿಲು ತೆಗೆಯುತ್ತಾಳೆ. ಮಳೆದೇವರು ಗಾಳಿ ದೇವರನ್ನು ಕರೆದು ಆಣೆ ಭಾಷೆ ಬಿಡಿಸುತ್ತಾಳೆ.ಗುಡುಗು ಮಿಂಚುಗಳು ಕಾಣಿಸಿ ಜಡಿಮಳೆ ಸುರಿಯುತ್ತದೆ. ಸೂತಕ ತೀರಿಸಿಕೊಂಡು, ಇಬ್ಬರೂ ಜೊತೆಯಲ್ಲಿ ಈಜಾಡಿ, ಜೊತೆಯಲ್ಲಿ ಹಾಲು ಅನ್ನ ಉಂಡು, ಆಮೇಲೆ ಇವತ್ತು ರಾತ್ರಿ ಶಿವನನ್ನು ಕಳುಹು ಎಂಬ ಗಂಗೆಯ ಮಾತನ್ನು ಕೇಳಿ 'ಎಲ್ಲಾದ್ರೂ ಉಂಟೇನೆ ಎಂದು ಹೇಳಿ ಮಾತಿಗೆ ತಪ್ಪುತ್ತಾಳೆ ಗೌರಿ ಕೇಶಾಕೇಶಿ ಮತ್ತೆ ಪ್ರಾರಂಭವಾಗುತ್ತದೆ. ಎರಡು ಮೂರು ಪೆಟ್ಟು ತಿಂದ ಗಂಗೆ ಕೈಬೀಸಿ ಮಳೆರಾಯನನ್ನು ಕರೆಯುತ್ತಾಳೆ. ಗಂಗೆ ಮೊಣಕಾಲುದ್ದ ನೀರಲ್ಲಿ ನಿಂತರೆ, ಗೌರಿ ಕೊಚ್ಚಿಹೋಗುತ್ತಾಳೆ. ಬೇಟೆಗೆ ಹೋಗಿದ್ದ ಶಿವ ಬರುತ್ತಾನೆ. ಗಂಗೆಯನ್ನು ಬೆಸ್ತರ ಮನೆಗೆ ಕಳಿಸುತ್ತ 'ವರ್ಷಕ್ಕೊಮ್ಮೆ ಮಾರಿ ಹಬ್ಬದಲ್ಲಿ ನೀನು ಬಾ, ನಡು ಊರಲ್ಲಿ ನಿನ್ನ ಪೂಜುತ್ತಾರೆ, ಕುರಿಕೋಳಿಗಳ ನಿನಗೆ ಕಡಿತಾರೆ ಎಂದು ಹೇಳುತ್ತಾನೆ. 'ಬ್ರಾಹ್ಮಣರ ಮನೆಯಲ್ಲಿ ಸೇರಿಕೋ, ವರ್ಷಕ್ಕೊಮ್ಮೆ ಗೌರಿಹಬ್ಬದಲ್ಲಿ ನೀನು ಬಾ, ಮಲ್ಲಿಗೆ ಹೂವಿನ ಪೂಜೆ ನಿನಗೆ ಮಾಡುತ್ತಾರೆ ಎಂದು ಗೌರಿಗೆ ಹೇಳಿಕಳಿಸುತ್ತಾನೆ. 'ನಿಮ್ಮಿಬ್ಬರ ಮಧ್ಯದಲ್ಲಿ ಶಿವರಾತ್ರಿ ಹಬ್ಬ, ಆ ಹಬ್ಬದಲ್ಲಿ ನಾ ಬರುತ್ತೀನಿ ಎಂದು ಶಿವ ಮೂವರಿಗೂ ಮೂರು ಹಬ್ಬ, ನಿಯಮಿಸುತ್ತಾನೆ.

Tuesday, 14 January 2020

ನಾನೀಗ ಬದಲಾಗಲೇಬೇಕು.


* ನನ್ನ ಬದುಕಿನಲ್ಲಿ ಬಂದ ಎಲ್ಲರನ್ನು ಪ್ರೀತಿಸಿದ ಅವಧಿ ಮುಗಿದಾಯ್ತು. ಈಗ ನನ್ನನ್ನು ಪ್ರೀತಿಸುವ ಸರತಿ ಬಂದಿದೆ.

* ಇಡೀ ಜಗತ್ತನ್ನು ನನ್ನ ಭುಜದ ಮೇಲೆ ಹೊರಲು ನಾನೇನು ಅಟ್ಲಾಸ್ ನಕ್ಷೆಯಲ್ಲ, ನನಗು ಮಿತಿಯಿದೆ.

* ಇತರರು ತಪ್ಪು ಮಾಡಬಹುದು. ಹಾಗೆಂದ್ ಮಾತ್ರಕ್ಕೆ ಅವರನ್ನು ತಿದ್ದುತ್ತಾ ಕೂರುವುದು ನನ್ನ ಕೆಲಸವಲ್ಲ ಎಂದು ಅರ್ಥವಾಗಿದೆ.

* ಎಲ್ಲರಲ್ಲೂ ಪರಿಪೂರ್ಣತೆ ಹುಡುಕುತ್ತಾ ಕುಳಿತುಕೊಳ್ಳುವ ಬದಲು ನೆಮ್ಮದಿಯತ್ತ ಮೊರೆ ಹೋಗುತ್ತೇನೆ. ನೆಮ್ಮದಿಯೆಂದರೆ ಪರಿಪೂರ್ಣತೆಗೆ ಮಿಗಿಲು.

* ಈಗ ಮೊದಲಿಗಿಂತ ಹೆಚ್ಚಾಗಿ ಒಳ್ಳೆಯದನ್ನು ಪ್ರಶಂಸಿಸಲು ಕಲಿತಿದ್ದೇನೆ. ಅದು ನನ್ನೆದುರಿನ ವ್ಯಕ್ತಿಯ ಚೈತನ್ಯವನ್ನು ಮಾತ್ರವಲ್ಲ, ನನ್ನ ಜೀವನೋತ್ಸಹವನ್ನು ಪುಷ್ಟಿಗೊಳಿಸುತ್ತಿದೆ.

* ನನ್ನ ಅಂಗಿ ಚೂರು ಹರಿದಿದ್ದರು ಅಥವಾ ಕಲೆಯಾಗಿದ್ದರು ಅದರ ಬಗ್ಗೆ ತಲೆ ಕೆಡಿಸಕೊಳುತ್ತಿಲ್ಲ ಅದೇನೇ ಆಗಲಿ ನನ್ನ ವ್ಯಕ್ತಿತ್ವ ಹೊರನೋಟಕ್ಕಿಂತ ಮಿಗಿಲು.


* ನನ್ನನ್ನು ಗೌರವಿಸದವರಿಂದ ಬಹುದೂರ ಉಳಿದು ಬಿಡುತ್ತೇನೆ. ನನಗೆ ನನ್ನ ಮೌಲ್ಯದ ಅರಿವುಳ್ಳಷ್ಟು ಅವರಿಗೆ ಎಲ್ಲಿ ಬರಬೇಕು ಅಲ್ಲವೇ?

* ನನ್ನನ್ನು ಹತ್ತಿಕ್ಕಲು ಬರುವವರ ಮುಂದೆ ಪ್ರಶಾಂತವಾಗಿ ವರ್ತಿಸುತ್ತೇನೆ. ಅವರೇ ಮುಂದೆ ಹೋಗಲಿ. ಅಷ್ಟಕ್ಕೂ ನಾನ್ಯಾವ ಓಟದ ಸ್ಪರ್ದಿಯಲ್ಲ.

* ನನ್ನದೇ ಭಾವನೆಗಳಿಂದ ನಾನು ಕಸಿವಿಸಿಗೊಳ್ಳುವುದನ್ನು ನಿಲ್ಲಿಸಿದ್ದೇನೆ. ಅಷ್ಟಕ್ಕೂ ಅವುಗಳಿಂದಲೇ ನಾನು ಮನುಷ್ಯವೆನ್ನಿಸಿಕೊಂಡಿರುವುದು.

* ಸಂಬಂಧಗಳೊಂದಿಗೆ ರಾಜಿಯಾಗುವುದನ್ನು ಕಲಿತಿದ್ದೇನೆ. ಅಷ್ಟಕ್ಕೂ ಸಂಬಂಧಗಳಿಗಿಂತ ನನ್ನ ಆಹಂಕಾರ ದೊಡ್ಡದೇನಲ್ಲ.

* ಈ ಕ್ಷಣದಲ್ಲಿ ಬದುಕುವುದನ್ನು ಕಲಿತಿದ್ದೇನೆ. ಯಾರಿಗೆ ಗೊತ್ತು? ಈ ಕ್ಷಣವೇ ನನ್ನ ಬದುಕಿನ ಅಂತಿಮ ಕ್ಷಣವಾಗಬಹುದು.

* ನನಗೆ ಸಂತೋಷ ಕೊಡುವುದನ್ನು ನಾನು ಮಾಡುತ್ತೇನೆ. ಇದು ನನ್ನ ಸಂತೋಷದ ಸರದಿ. ಅದಕ್ಕೆ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ. ಸಂತೋಷಕ್ಕೆ ನ್ಯಾಯ ಒದಗಿಸುವುದೆಂದರೆ,  ನನಗೆ ನಾನು ನ್ಯಾಯ ಒದಗಿಸುವುದು ಅಂದರ್ಥ.

ಯಲ್ಲಪ್ಪ ನಂದಿ. 







Monday, 23 December 2019

ಅಹಂಕಾರ ಎಂದರೇನು?


ಅಹಂ ಎಂದರೆ ಜೀವದ ಸ್ವಕೃತ ಧರ್ಮ. ‘ಸ್ವಕೃತ’ ಎಂಬ ಶಬ್ದವನ್ನು ‘ಸ್ವ’ದ ಅರಿವಿನಿಂದ, ಅಂದರೆ ತನ್ನತನದ ಅರಿವಿನಿಂದ ಜೀವವು ಸ್ವೀಕರಿಸಿದ ಕೃತಿಸ್ವರೂಪ ಕರ್ಮ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ.


‘ನಾನು ಹೋದರೆ ಹೋದೇನು’ ಎಂದು ಹೇಳಿದ ಕನಕದಾಸರ ಈ ಪ್ರಸಿದ್ಧ ಉಕ್ತಿಯಿಂದ ಮನುಷ್ಯನಲ್ಲಿನ ‘ನನ್ನತನ’ದ, ಅಂದರೆ ಅಹಂಭಾವದ ವ್ಯರ್ಥತೆಯು ತಿಳಿಯುತ್ತದೆ. ಅಹಂಭಾವವು ಮನುಷ್ಯನ ಲೌಕಿಕ ಮತ್ತು ಪಾರಮಾರ್ಥಿಕ ಸುಖದಲ್ಲಿನ ಒಂದು ದೊಡ್ಡ ಅಡಚಣೆಯಾಗಿದೆ. ಅಹಂಭಾವದ ಬೀಜವು ಮನುಷ್ಯ ಜನ್ಮದಲ್ಲಿಯೇ ಇರುವುದರಿಂದ ಹಿರಿಯ-ಕಿರಿಯ, ಬಡವ-ಬಲ್ಲಿಗ, ಅಶಿಕ್ಷಿತ-ಸುಶಿಕ್ಷಿತ ಇತ್ಯಾದಿ ಎಲ್ಲರಲ್ಲಿಯೂ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಅಹಂಭಾವವು ಇದ್ದೇ ಇರುತ್ತದೆ.


ಅಹಂಭಾವವು ಹೊಲದಲ್ಲಿ ಬೆಳೆಯುವ ಹುಲ್ಲಿನಂತಿರುತ್ತದೆ. ಎಲ್ಲಿಯವರೆಗೆ ನಾವು ಆ ಹುಲ್ಲನ್ನು ಬೇರುಸಮೇತ ನಾಶಮಾಡುವುದಿಲ್ಲವೋ, ಅಲ್ಲಿಯವರೆಗೆ ಒಳ್ಳೆಯ ಬೆಳೆ ಬರುವುದಿಲ್ಲ. ಆ ಹುಲ್ಲನ್ನು ನಮಗೆ ಸತತವಾಗಿ ನಾಶಮಾಡುತ್ತಲೇ ಇರಬೇಕಾಗುತ್ತದೆ; ಅದರಂತೆಯೇ ಅಹಂಭಾವವು ಸಂಪೂರ್ಣ ನಾಶವಾಗದ ಹೊರತು ಪರಮೇಶ್ವರನ ಕೃಪೆಯ ಬೆಳೆಯು ಬರಲು ಸಾಧ್ಯವಿಲ್ಲ. ಸಾಧನೆಯ ಉದ್ದೇಶವೇ ಅಹಂಭಾವವನ್ನು ನಾಶ ಮಾಡುವುದಾಗಿದೆ; ಆದರೂ ಮನುಷ್ಯನಲ್ಲಿ ಅಹಂಭಾವವು ಎಷ್ಟು ಬೇರೂರಿರುತ್ತದೆ ಎಂದರೆ ಸಾಧನೆಯನ್ನು ಮಾಡು ವಾಗಲೂ ಅದನ್ನು ಸಂಪೂರ್ಣ ನಾಶಮಾಡಲು ಸಹಜ ಸಾಧ್ಯವಾಗುವುದಿಲ್ಲ; ಆದುದರಿಂದ ಸಾಧನೆಯಿಂದ ಅಹಂಭಾವವು ತಾನಾಗಿಯೇ ಕಡಿಮೆಯಾಗುವುದು ಎಂದು ವಿಚಾರವನ್ನು ಮಾಡದೇ ಅಹಂಭಾವವನ್ನು ಕಡಿಮೆ ಮಾಡಿಕೊಳ್ಳಲು ಸತತವಾಗಿ ಪ್ರಯತ್ನ ಮಾಡಬೇಕು.


೧. ‘ಅಹಂ’ ಶಬ್ದದ ವ್ಯಾಖ್ಯೆ ಮತ್ತು ಅರ್ಥ


ಅ. ಸ್ಥೂಲದೇಹದಿಂದಾಗಿ ಅಥವಾ ಲಿಂಗದೇಹದಲ್ಲಿನ ವಿವಿಧ ಸಂಸ್ಕಾರ ಕೇಂದ್ರಗಳಲ್ಲಿನ ಸಂಸ್ಕಾರಗಳಿಂದಾಗಿ ತನ್ನನ್ನು ತಾನು ಇತರರಿಂದ ಮತ್ತು ಈಶ್ವರನಿಂದ ಬೇರೆ ಎಂದು ಪರಿಗಣಿಸುವುದು ಎಂದರೆ ಅಹಂ.

ಆ. ನಾನು, ನನ್ನದು, ನನಗೆ, ಇಂತಹ ಅಭಿಮಾನವನ್ನಿಟ್ಟುಕೊಳ್ಳುವುದು ಎಂದರೆ ಅಹಂ. ನನ್ನ ದೇಹ, ನನ್ನ ಮನಸ್ಸು, ನನ್ನ ಪ್ರಾಣ, ನನ್ನ ಬುದ್ಧಿ, ನನ್ನ ಸಂಪತ್ತು, ನನ್ನ ಹೆಂಡತಿ- ಮಕ್ಕಳು, ನನಗೆ ಸುಖ ಸಿಗಬೇಕು ಎಂಬ ವಿಚಾರಗಳು ಅಹಂನಿಂದಲೇ ನಿರ್ಮಾಣವಾಗುತ್ತವೆ. ಈರುಳ್ಳಿಯ ಸಿಪ್ಪೆಯನ್ನು ಸುಲಿದರೆ ಸಿಪ್ಪೆಯೇ ಸಿಗುತ್ತದೆ ಹೊರತು, ಯಾವ ಸಾರವೂ ಕೈಗೆ ಸಿಗುವುದಿಲ್ಲ, ಹಾಗೆಯೇ ವಿಚಾರ ಮಾಡಿದಾಗ ‘ನಾನು’ ಎನ್ನುವ ವಸ್ತುವೇ ಸಿಗಲಾರದು. ಕೊನೆಗೆ ಏನು ಉಳಿಯುತ್ತದೆಯೋ ಅದೇ ಆತ್ಮ-ಚೈತನ್ಯ.

೨. ಅಹಂಭಾವದ ವಿಧಗಳು


೨ ಅ. ಈಶ್ವರನ ಅಹಂ


ಅಹಂಕಾರ ಈ ಶಬ್ದವು ಅಹಂ + ಆಕಾರ ಹೀಗೆ ರೂಪುಗೊಂಡಿದೆ. ಆಕಾರವು ಹೋಯಿತೆಂದರೆ ಅಹಂ ಮಾತ್ರ ಉಳಿಯುತ್ತದೆ. ಆಗ ‘ನೀನು’ ಇಲ್ಲದಿರುವಂತಹ ‘ನಾನು’ ಉಳಿಯುತ್ತದೆ, ಅರ್ಥಾತ್ ಬ್ರಹ್ಮ ಅಥವಾ ಈಶ್ವರ ಮಾತ್ರ ಉಳಿಯುತ್ತಾನೆ. ಅಹಂರಹಿತ ‘ನಾನು’ ಎಂದರೆ ಬ್ರಹ್ಮ ಅಥವಾ ಈಶ್ವರ.


೨ ಆ. ಮನುಷ್ಯನ ಅಹಂ


೨ ಆ ೧. ಶುದ್ಧ ಅಹಂ : ಇದು ಮುಂದಿನಂತಿರುತ್ತದೆ.


ಅ. ಬ್ರಹ್ಮನಿಂದ ತನ್ನನ್ನು ಬೇರೆ ಎಂದು ತಿಳಿಯುವುದು, ಅಂದರೆ ದ್ವೈತದಲ್ಲಿದ್ದು ಸ್ವಸ್ವರೂಪದ ಅರಿವಿರುವುದು


ಆ. ಅಸ್ತಿತ್ವದ ಅರಿವು ಮಾತ್ರ ಇರುವುದು


ಇ. ‘ನಾನು ಇತರರವನಾಗಿದ್ದೇನೆ ಮತ್ತು ಎಲ್ಲರೂ ನನ್ನವರಾಗಿದ್ದಾರೆ’ ಎನ್ನುವ ಭಾವವಿರುವುದು. ದೇಹ ಇರುವವರೆಗೆ ಜಾಗೃತಾವಸ್ಥೆಯಲ್ಲಿ ಶುದ್ಧ ಅಹಂ ಇದ್ದೇ ಇರುತ್ತದೆ.೨ ಆ ೨. ಅಶುದ್ಧ ಅಹಂ : ‘ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂ ನಿರ್ಮಾಣವಾಗಿ, ಆ ಉತ್ಪತ್ತಿಯ ಪರಮಾವಧಿ ಆಯಿತೆಂದರೆ ಅಂತಃಕರಣವು ಸಂಪೂರ್ಣವಾಗಿ ಜನ್ಮಕ್ಕೆ ಬಂದಿದೆ ಎಂದು ತಿಳಿಯಬೇಕು. ಐಹಿಕ ಸುಖದ ಎಲ್ಲ ಕ್ರಿಯೆಗಳೂ ಅಹಂನ ಆಧಾರದಿಂದಲೇ ನಡೆಯುತ್ತವೆ. ಕಲಿಯುಗದಲ್ಲಿನ ಬುದ್ಧಿ ಮತ್ತು ಅಹಂ ಇವುಗಳ ಬಗ್ಗೆ ಹೀಗೆ ಹೇಳಬಹುದು – ಬುದ್ಧಿಯ ಪರಿಪೂರ್ಣ ವಿಕಾಸ ಎಂದರೆ ದೇಹಬುದ್ಧಿ. ದೇಹಸುಖ ಪಡೆಯಲು ಬುದ್ಧಿವಂತಿಕೆಯ ಗರಿಷ್ಠ ಮಿತಿ ಎಂದರೆ ಬುದ್ಧಿ ! ಅಹಂ ಎಂದರೆ ಬುದ್ಧಿಯ ಪರಿಪೂರ್ಣ ವಿಕಾಸ !’



೨ ಆ ೨ ಅಶುದ್ಧ ಅಹಂ : ಅಶುದ್ಧ ಅಹಂ ಎಂದರೆ ದೇಹದಿಂದಾಗಿ ಅಥವಾ ಲಿಂಗದೇಹದಲ್ಲಿನ ಸ್ವಭಾವ, ವಾಸನೆ, ಇಷ್ಟಾನಿಷ್ಟ ಮುಂತಾದ ಸಂಸ್ಕಾರಕೇಂದ್ರಗಳಲ್ಲಿನ ಸಂಸ್ಕಾರಗಳಿಂದಾಗಿ ತನ್ನ ಅಸ್ತಿತ್ವದ ಅರಿವಿರುವುದು. ವಿಚಾರಗಳು ಹಾಗೂ ಭಾವನೆಗಳಿಗನುಸಾರವಾಗಿ ಅಹಂಭಾವವು ಸಾತ್ತ್ವಿಕ, ರಾಜಸಿಕ ಅಥವಾ ತಾಮಸಿಕವಾಗಿರುತ್ತದೆ. ಅಹಂಭಾವದ ಈ ಮೂರು ವಿಧಗಳನ್ನು ‘ಅಹಂತ್ರಯ’ ಅಥವಾ ‘ತ್ರಿವಿಧ ಅಹಂ’ ಎನ್ನುತ್ತಾರೆ.


೨ ಆ ೨ ಅ. ತಾಮಸಿಕ ಅಹಂ : ತಮೋಗುಣ ಪ್ರಧಾನವಾಗಿರುವಂತಹ ಅಹಂಭಾವವನ್ನು ‘ಭೂತಾದಿ’ ಅಥವಾ ‘ತಾಮಸಿಕ ಅಹಂ’ ಎನ್ನುತ್ತಾರೆ. ಉದಾ. ಕೇವಲ ಸ್ವಕರ್ತೃತ್ವವನ್ನು ಮಾತ್ರ ಒಪ್ಪಿಕೊಳ್ಳುವುದು.


೨ ಆ ೨ ಆ. ರಾಜಸಿಕ ಅಹಂ : ರಜೋಗುಣದ ಪ್ರಾಬಲ್ಯವಿರುವಂತಹ ಅಹಂಭಾವವನ್ನು ‘ತೈಜಸ’ ಅಥವಾ ‘ರಾಜಸಿಕ ಅಹಂಭಾವ’ ಎನ್ನುತ್ತಾರೆ. ಉದಾ. ಸದಾಕಾಲ ಸುಖಕ್ಕಾಗಿ ಚಡಪಡಿಸುವುದು.


೩ ಆ ೨ ಇ. ಸಾತ್ತ್ವಿಕ ಅಹಂ : ಸತ್ತ್ವಗುಣ ಪ್ರಧಾನವಾಗಿರುವಂತಹ ಅಹಂಭಾವವನ್ನು ‘ವೈಕೃತ’ ಅಥವಾ ‘ಸಾತ್ತ್ವಿಕ ಅಹಂ’ ಎನ್ನುತ್ತಾರೆ. ಉದಾ. ತ್ಯಾಗದ ಅಹಂ ಸಾತ್ತ್ವಿಕವಾಗಿರುತ್ತದೆ.


(ಆಧಾರ : ಸನಾತನ ನಿರ್ಮಿತ ‘ಅಹಂ ನಿರ್ಮೂಲನೆಗಾಗಿ ಸಾಧನೆ’ ಗ್ರಂಥ)


ಯಲ್ಲಪ್ಪ ನಂದಿ 

Tuesday, 22 October 2019

ಕಿತ್ತೂರು ರಾಣಿ ಚೆನ್ನಮ್ಮ ಹುಟ್ಟು ಹಬ್ಬದ ಶುಭಾಷಯಗಳು.



ದಿನಾಂಕ 23-10-19  ರಂದು ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ನಿಮಿತ್ತ ಈ ವಿಶೇಷ ಲೇಖನ.

ಅಪ್ರತಿಮ ದೇಶ ಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದ ಚೆನ್ನಮ್ಮಳ ಸ್ವಾತಂತ್ರ್ಯ ಪ್ರೇಮ, ಅದಕ್ಕಾಗಿ ಆಕೆ ನಡೆಸಿದ ಹೋರಾಟ, ಆಕೆಯ ಬದುಕಿನ ಸಾರ್ಥಕ ಪುಟಗಳ ಒಂದು ಪುಟ್ಟ ಅವಲೋಕನ ಇದು, ನಿಮಗಾಗಿ...

ನಮಸ್ಕಾರ ಸ್ನೇಹಿತರೇ,

ನಮ್ಮ ಕನ್ನಡ ನಾಡು ಹಿಂದಿನಿಂದಲೂ ಸಾಕಷ್ಟು ವೀರರೂ ಶೂರರೂ ಇದ್ದಂತಹಾ ನಾಡು ಅದರಲ್ಲಿಯೂ ಉತ್ತರ ಕರ್ನಾಟಕದ ಭಾಗವು ಗಂಡುಗಲಿಗಳ ನಾಡೆಂದೇ ಪ್ರಸಿದ್ದಿಯನ್ನು ಹೊಂದಿದೆ. ಅಂತಹುದರಲ್ಲಿ ಬೆಳಗಾವಿಯಲ್ಲಿನ ಕಿತ್ತೂರು ಸಂಸ್ಥಾನವನ್ನಾಳಿದ ವೀರ ಮಹಿಳೆ ಚೆನ್ನಮ್ಮಾಜಿಯೂ ಒಬ್ಬಳು. ಇಡೀ ದೇಶವನ್ನು ಆಕ್ರಮಿಸಿಕೊಂಡಿದ್ದ ಬ್ರಿಟೀಷರನ್ನು ಗಡ ಗಡನೆ ನಡುಗುವಂತೆ ಮಾಡಿದ್ದಲ್ಲದೆ ತಾನೊಬ್ಬಳೇ ಏಕಾಂಗಿಯಾಗಿ ಅವರ ವಿರುದ್ದ ಹೋರಾಡಿ ಕನ್ನಡಿಗರ ಕೆಚ್ಚೆದೆಯ ಹೋರಾಟಕ್ಕೆ ಸಾಕ್ಷಿಯಾದವಳು. (ಫೆಬ್ರವರಿ 2 ರಂದು ರಾಣಿ ಚೆನ್ನಮ್ಮಳ ಸ್ಮೃತಿ ದಿನವನ್ನಾಗಿ ಕೂಡ ಆಚರಿಸಲಾಗುತ್ತಿದೆ)

ಬೆಳಗಾವಿ ಜಿಲ್ಲೆಯ ಕಿತ್ತೂರು ಇಂದು ರಾಣಿ ಚೆನ್ನಮ್ಮನಿಂದಾಗಿ ವಿಶ್ವ ವಿಖ್ಯಾತವಾಗಿದೆ. ಈ ಕಿತ್ತೂರನ್ನು ಆಳಿದ ದೇಸಾಯಿಗಳಲ್ಲಿ ಅತ್ಯಂತ ಪ್ರಮುಖರಾದ ಮಲ್ಲಸರ್ಜ ದೇಸಾಯಿಯವರ ಎರಡನೇ ಪತ್ನಿಯಾಗಿದ್ದ ವೀರ ರಾಣಿ ಚೆನ್ನಮ್ಮ ತನ್ನ ಪುಟ್ಟ ರಾಜ್ಯ ಕಿತ್ತೂರಿನ ರಕ್ಷಣೆಗಾಗಿ ಬಹುತೇಕ ಭಾರತವನ್ನೇ ಆಕ್ರಮಿಸಿಕೊಂಡಿದ್ದ ಪ್ರಬಲರಾದ ಬ್ರಿಟೀಷರ ವಿರುದ್ದ ಸೆಟೆದು ನಿಂತವಳು. ತಾನೊಬ್ಬಳೇ ಏಕಾಂಗಿಯಾಗಿ ಹೋರಾಡಿದ ಈ ಧೀರ ಮಹಿಳೆಯ ಕಥೆ ಎಂಥವರಿಗೂ ಸ್ಪೂರ್ತಿದಾಯಕವಾಗಬಲ್ಲುದು.

ರಾಣಿ ಚೆನ್ನಮ್ಮ ಹುಟ್ಟಿದ್ದು ಬೆಳಗಾವಿ ನಗರದಿಂದ ಆರು ಕಿಲೋಮೀತರ್ ದೂರದಲ್ಲಿರುವ ಕಾಕತಿ ಎಂಬ ಪುಟ್ಟ ಗ್ರಾಮದಲ್ಲಿ. ೧೭೭೮ರಲ್ಲಿ ಹುಟ್ಟಿದ ಚೆನ್ನಮ್ಮಳ ತಂದೆ ಕಾಕತಿಯ ದೇಸಾಯಿಯಾಗಿದ್ದ ಧೂಳಪ್ಪಗೌಡರು. ಚೆನ್ನಮ್ಮ ತಾನು ಚಿಕ್ಕ ವಯಸ್ಸಿನಲ್ಲಿಯೇ ಕುದುರೆ ಸವಾರಿ, ಬಿಲ್ಲು ವಿದ್ಯೆಯಲ್ಲಿ ಪರಿಣಿತಿಯನ್ನು ಪಡೆದಿದ್ದಳು. ಚಿಕ್ಕಂದಿನಿಂದಲೂ ಅಂಜಿಕೆ ಯಿರದ ಧೈರ್ಯವಂತೆಯಾಗಿದ್ದ ಚೆನ್ನಮ್ಮಳು ತಾನು ಎಂತಹಾ ಕಷ್ಟದ ಪರಿಸ್ಥಿತಿಯನ್ನೂ ಎದುರಿಸಬಲ್ಲವಳಾಗಿದ್ದಳು. ಹೀಗಾಗಿಯೇ ಮುಂದೆ ತನ್ನ ರಾಜ್ಯಕ್ಕೆದುರಾದ ಕಠಿಣ ಪರಿಸ್ಥಿತಿಯಲ್ಲಿಯೂ ತಾನು ಒಂದಿನಿತೂ ಅಳುಕದೆ ರಾಜನಿಷ್ಠರಾಗಿದ್ದ ಗುರುಸಿದ್ದಪ್ಪ, ನರಸಿಂಗರಾವ್ ಮತ್ತಿತರರ ಬೆಂಬಲದೊಡನೆ ತನ್ನ ದತ್ತು ಮೊಮ್ಮಗನಿಗೆ ಪಟ್ಟಕಟ್ಟಿದ್ದಳು.

ಬಿಜಾಪುರ ಸುಲ್ತಾನರ ಪತನದ ಬಳಿಕ ಉತ್ತರ ಕರ್ನಾಟಕದಾದ್ಯಂತ ಒಂದು ಬಗೆಯ ಅರಾಜಕತೆಯುಂಟಾಗುತ್ತದೆ. ದಕ್ಷಿಣದ ಮೈಸೂರನ್ನಾಳುತ್ತಿದ್ದ ಒಡೆಯರ್ ರನ್ನು ಮೂಲೆಗುಂಪು ಮಾಡಿ ರಾಜ್ಯದ ಆಡಳಿತವನ್ನೆಲ್ಲಾ ತಮ್ಮ ಕೈಗೆ ತೆಗೆದುಕೊಂಡಿದ್ದ ಹೈದರ್ ಹಾಗೂ ಟಿಪ್ಪು ಸುಲ್ತಾನರುಗಳು ಉತ್ತರದಲ್ಲಿನ ಆ ಅರಾಜಕತೆಯ ಲಾಭವನ್ನು ಪಡೆಯಲು ಹವಣಿಸುತ್ತಿದ್ದರೆ ಇನ್ನೊಂದು ಕಡೆ ಮರಾಠಾ ಪೇಶ್ವೆಗಳು ಸಹ ತಮಗೆ ಎಲ್ಲಾದರೂ ಅವಕಶ ದಕ್ಕೀತೆಂದು ಕಾಯುತ್ತಿರುತ್ತಾರೆ. ಇನ್ನೊಂದು ಕಡೆ ಭಾರತೀಯ ರಾಜರುಗಳ ಈ ಒಳಜಗಳ, ಅದರಿಂದುಂಟಾದ ಅರಾಜಕತೆ ಇವು ಬ್ರಿಟೀಷರು ಭಾರತದಲ್ಲಿ ತಮ್ಮ ಭದ್ರ ನೆಲೆಯನ್ನು ಕಂಡುಕೊಳ್ಳಲು ಸಹಕಾರಿಯಾದವು.

ಪರಿಸ್ಥಿತಿ ಹೀಗಿರಲು ಟಿಪ್ಪು ಸುಲ್ತಾನನು ಕಿತ್ತೂರಿನ ದೊರೆ ಮಲ್ಲಸರ್ಜನನ್ನು ಬಂಧಿಸಿ ಕಪಾಲದುರ್ಗ ಎನ್ನುವಲ್ಲಿ ಸೆರೆಯಿಟ್ಟಿದ್ದನು. ಅವನ ಸೆರೆವಾಸದಿಂದ ತಪ್ಪಿಸಿಕೊಂಡ ದೊರೆ ಮಲ್ಲಸರ್ಜನು 1803 ರಲ್ಲಿ ಅಂದಿನ ಬ್ರಿಟೀಷ್ ಗವರ್ನರ್ ಲಾರ್ಡ್ ವೆಲ್ಲಸ್ಲಿ ಗೆ ನೆರವು ನೀಡುವ ಮೂಲಕ ಕಿತ್ತೂರು ಸಂಥಾನವನ್ನು ಭದ್ರಗೊಳಿಸಿದ್ದನು. 1809 ರಲ್ಲಿ ಮರಾಠ ಪೇಶ್ವೆಯವರಿಗೂ ನೆರವಾಗಿ ಅವರಿಂದ ಸನ್ನದನ್ನು ಹೊಂದಿದ್ದನು. ಆದರೆ ಪೇಶ್ವೆಗಳು ತಾವು ಸಹ ಮಲ್ಲಸರ್ಜನಿಗೆ ವಿಶ್ವಾಸ ದ್ರೋಹವೆಸಗಿ ಅವನನ್ನು ಬಂಧಿಸಿ ಮೂರು ವರ್ಷಗಳ ಕಾಲ ಪೂನಾದ ಜೈಲಿನಲ್ಲಿಟ್ತರು. ಇದಾಗಿ 1816 ರಲ್ಲಿ ಅಲ್ಲಿಂದ ಬಿಡುಗಡೆಯಾಗಿ ಕಿತ್ತೂರಿಗೆ ಮರಳುತ್ತಿರುವಾಗ ಮಾರ್ಗಮಧ್ಯದಲ್ಲಿಯೇ ಮಲ್ಲಸರ್ಜನು ಕೊನೆಯುಸಿರೆಳೆದನು.

ಇವನ ಬಳಿಕ ಅಧಿಕಾರವನ್ನು ವಹಿಸಿಕೊಂಡಿದ್ದ ಶಿವಲಿಂಗರುದ್ರಸರ್ಜನು ತಾನು ಬ್ರಿಟೀಷರೊಡನೆ ಸ್ನೇಹದಿಂದಿದ್ದನು. ಈ ಒಂದು ಸ್ನೇಹದ ಕುರುಹಾಗಿ ಪ್ರತಿ ವರ್ಷ ಒಂದು ಲಕ್ಷದ ಎಪ್ಪತ್ತು ಸಾವಿರ(1,70,000) ರೂಪಾಯಿ ಬ್ರಿಟೀಷರ ಕೈಸೇರಿರುತ್ತಿತ್ತು! ಶಿವಲಿಂಗರುದ್ರಸರ್ಜನು ತಾನು 11 ಸೆಪ್ಟೆಂಬರ್ 1824 ರಂದು ತನ್ನ ರಾಜ್ಯಕ್ಕೆ ವಾರಸುದಾರರಿಲ್ಲದೆ ತೀರಿಕೊಂಡನು. ಶಿವಲಿಂಗರುದ್ರಸರ್ಜನು ತಾನು ಸಾಯುವ ಸಮಯದಲ್ಲಿ ಆತನ ಮಡದಿಗೆ ಕೇವಲ 11 ವರ್ಷ! ಶಿವಲಿಂಗ ಮಲ್ಲಸರ್ಜನು ತಾನು ಮರಣ ಹೊಂದುವ ಮುನ್ನ ಮಾಸ್ತವರಡಿ ಗೌದರ ಪುತ್ರ ಶಿವಲಿಂಗಪ್ಪನನ್ನು ದತ್ತು ಪಡೆದಿರುತ್ತಾನೆ. ಆದರೆ ಅಂದಿನ ಬ್ರಿಟೀಷರ ಕಂಪನಿ ಸರ್ಕಾರ ಈ ದತ್ತು ಪುತ್ರನು ರಾಜ್ಯದ ಒಡೆಯನಾಗಲು ಸರ್ವಥಾ ನಿರಾಕರಿಸುತ್ತದೆ. ಆ ಸಮಯದಲ್ಲಿ ಧಾರವಾಡ ಸೀಮೆಯ ಕಲೆಕ್ಟರ್ ಆಗಿದ್ದ ಥ್ಯಾಕರೆಯು ತಾನು ಸ್ವತಃ ಕಿತ್ತೂರಿಗೆ ಭೇಟಿ ನೀಡಿ ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೆ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ.

ಕಿತ್ತೂರಿನ್ನು ಬ್ರಿಟೀಷರ ಆಕ್ರಮಣಗಳಿಂದ ರಕ್ಶಿಸಲು ಚೆನ್ನಮ್ಮ ಸಾಕಷ್ಟು ಪ್ರಯತ್ನ ಪಡುತ್ತಾಳೆ. ಮೊದಲು ಬ್ರಿಟೀಷ್ ಅಧಿಕಾರಿಗಳಾಗಿದ್ದ ಥ್ಯಾಕರೆ, ಮನ್ರೋ, ಚಾಪ್ಲಿನ್ ರವರುಗಳಿಗೆ ಸಂಧಾನ ಮಾಡಿಕೊಳ್ಳುವ ಸಲುವಾಗಿ ಪತ್ರ ಬರೆಯುತ್ತಾಳೆ. ಆದರೆ ಬ್ರಿಟೀಷರು ಅದಾಗಲೇ ಕಿತ್ತೂರನ್ನು ವಶಪಡಿಸಿಕೊಂಡೇ ಸಿದ್ದ ಎಂಬ ತೀರ್ಮಾನಕ್ಕೆ ಬಂದಾಗಿರುತ್ತದೆ. ಇದನ್ನರಿತ ಚೆನ್ನಮ್ಮನು ತಾನು ಹಠ ಬಿಡದೆ ನೆರೆ ರಾಜ್ಯದ ರಾಜರುಗಳ ಸಹಕಾರ ಕೋರಿ ಅವರಿಗೂ ಓಲೆ ಕಳುಹಿಸುತ್ತಾಳೆ. ಆದರೆ ಯಾರಿಂದಲೂ ತಕ್ಕ ಸಮಯಕ್ಕೆ ಸಹಕಾರ ದೊರೆಯದೆ ಹೋಗುತ್ತದೆ.

21 ಅಕ್ಟೋಬರ್ 1824 ಕ್ಕೆ ಥ್ಯಾಕರೆ ಕಿತ್ತೂರಿಗೆ ತಾನು ಸೈನ್ಯ ಸನ್ನದ್ದನಾಗಿ ಆಗಮಿಸುತ್ತಾನೆ. 23 ಅಕ್ಟೋಬರ್ 1824 ರಂದು ಥ್ಯಾಕರೆ ಅಧಿಕೃತವಾಗಿ ಯುದ್ದವನ್ನು ಆರಂಭಿಸುತ್ತಾನೆ. ಕೋಟೆಯ ಮೇಲೆ ತೋಪನ್ನು ಹಾರಿಸಲು ಅಪ್ಪಣೆ ಮಾಡಿದ ಥ್ಯಾಕರೆಯ ಸೈನ್ಯದ ಮೇಲೆ ಕೋಟೆಯೊಳಗಿನಿಂದ ನುಗ್ಗಿಬಂದ ಕಿತ್ತೂರಿನ ಸಾವಿರಾರು ಸಂಖ್ಯೆಯ ವೀರರ ಪಡೆ ಒಂದೇ ಸಮನೆ ಧಾಳಿಗೆ ತೊಡಗುತ್ತದೆ. ಚೆನ್ನಮ್ಮಳ ಅಂಗರಕ್ಷಕನಾಗಿದ್ದ ಅಮಟೂರು ಬಾಳಪ್ಪ ಹಾರಿಸಿದ ಗುಂಡಿಗೆ ಥ್ಯಾಕರೆ ಬಲಿಯಾಗುತ್ತಾನೆ. ಸ್ಟೀವನ್ಸನ್ ಹಾಗೂ ಈಲಿಯಟ್ ಎನ್ನುವ ಇಬ್ಬರು ಅಧಿಕಾರಿಗಳು ಸೆರೆಯಾಗುತ್ತಾರೆ. ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾಗುತ್ತಾರೆ.

ಹೀಗೆ ಮೊದಲ ಬಾರಿಗೆ ಬ್ರಿಟೀಷರ ವಿರುದ್ದ ಕಾಳಗದಲ್ಲಿ ಗೆದ್ದು ತನ್ನ ನಾಡಿನ ಸ್ವಾತಂತ್ರ್ಯ ಪತಾಕೆಯನ್ನು ಹಾರಿಸಿದ ಚೆನ್ನಮ್ಮಳ ವಿರುದ್ದ ಬ್ರಿಟೀಷರು ಒಳ ಒಳಗೇ ಕತ್ತಿ ಮಸೆಯುತ್ತಿರುತ್ತಾರೆ. ಸಣ್ಣ ಸಂಸ್ಥಾನವೊಂದರ ರಾಣಿಯೊಬ್ಬಳಿಂದ ಸೋತು ಅವಮಾನಿತರಾದ ಬ್ರಿಟೀಷರಿಗೆ ಚೆನ್ನಮ್ಮಳ ಮೇಲೆ ಮತ್ತಷ್ಟು ದ್ವೇಷ ಕೆರಳುತ್ತದೆ.

ಇಬ್ಬರ ನಡುವೆ ಮತ್ತೆ ಪತ್ರ ವ್ಯವಹಾರಗಳು ಆರಂಭಗೊಳ್ಳುತ್ತವೆ. ಅದಾಗಿ 1824 ಡಿಸೆಂಬರ್ 2 ರಂದು ಚೆನ್ನಮ್ಮಳಲ್ಲಿ ಸೆರೆಯಾಳಾಗಿದ್ದ ಸ್ಟೀವನ್ಸನ್ ಹಾಗೂ ಈಲಿಯಟ್ ರ ಬಿಡುಗಡೆಯಾಗುತ್ತದೆ. ಇದಾದ ಮರುದಿನ ಎಂದರೆ ಡಿಸೆಂಬರ್ 3 1824 ರಂದು ಬ್ರಿಟೀಷರು ಮತ್ತೆ ಬೃಹತ್ ಸೈನ್ಯದೊಂದಿಗೆ ಕಿತ್ತೂರಿನ ಮೇಲೆ ಮುಗಿಬೀಳುತ್ತಾರೆ. ಡಿಸೆಂಬರ್ 4 ರಂದು ಸರ್ದಾರ ಗುರುಸಿದ್ದಪ್ಪನು ಸೆರೆಯಾಗುತ್ತಾನೆ. ಡಿಸೆಂಬರ್ 5, 1824 ರಂದು ಕೆಚ್ಚೆದೆಯ ವೀರ ರಾಣಿ ಚೆನ್ನಮ್ಮಾಜಿಯು ತಾನು ತನ್ನ ಸೊಸೆಯಂದಿರಾದ ವೀರಮ್ಮ ಹಾಗೂ ಜಾನಕಿಬಯಿಯವರ ಜತೆ ಕೈದಿಯಾಗುತ್ತಾಳೆ. ಅವರನ್ನು ತುರ್ತು ವಿಚಾರಣೆ ನಡೆಸಿದ (ವಿಚಾರಣೆ ನಡೆಸಿದ ನಾಟಕ ಆಡಿದ) ಬ್ರಿಟೀಷ್ ನ್ಯಾಯಾಸ್ಥಾನವು ಡಿಸೆಂಬರ್ 12 1824 ಕ್ಕೆ ಬೈಲಹೊಂಗಲದ ಕಾರಾಗ್ರಹಕ್ಕೆ ಸ್ಥಳಾಂತರಿಸುತ್ತಾರೆ. ಅಲ್ಲೇ ನಾಲ್ಕು ವರ್ಷಗಳ ಕಾಲ ಸೆರೆಯಾಳಾಗಿದ್ದ ಚೆನ್ನಮ್ಮಾಜಿಯು 1829 ಫೆಬ್ರವರಿ 2 ರಂದು ಅಲ್ಲಿಯೇ ಮರಣಹೊಂದುತ್ತಾಳೆ.

ಚೆನ್ನಮ್ಮಳ ಮರಣದ ಬಳಿಕವೂ ದೇಶನಿಷ್ಠರ ಹೋರಾಟ ಮುಂದುವರಿಯುತ್ತದೆ. ಯುದ್ದ ಖೈದಿಯಾಗಿದ್ದು ಬಿಡುಗಡೆಯಾದ ಅಪ್ರತಿಮ ದೇಶಭಕ್ತ ಸಂಗೊಳ್ಳಿ ರಾಯಣ್ಣನು ತಾನು ಚೆನ್ನಮ್ಮಳ ದತ್ತು ಪುತ್ರ ಶಿವಲಿಂಗಪ್ಪನ ಮುಂದಾಳತ್ವವನ್ನಿಟ್ಟುಕೊಂಡು ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾನೆ. ಆದರೆ 1830 ಫೆಬ್ರವರಿಯಲ್ಲಿ ನಮ್ಮವರೇ ಕೆಲ ವಿಶ್ವಾಸ ದ್ರೋಹಿಗಳು ರಾಯಣ್ಣನಿರುವ ಸ್ಥಳವನ್ನು ಕಂಪನಿ ಸರ್ಕಾರದವರಿಗೆ ತೋರಿಸಿ ಅವನನ್ನು ಸೆರೆಹಿಡಿಸುತ್ತಾರೆ. ಅದೇ 1830 ಮೇ ನಲ್ಲಿ ಕಿತ್ತೂರ ದೊರೆಯಾದ ಶಿವಲಿಂಗಪ್ಪ ಮತ್ತವನ ನಾಲ್ಕು ಸಾವಿರ ಬೆಂಬಲಿಗರು ತಾವು ಬ್ರಿಟೀಷರಿಗೆ ಸ್ವಯಂ ಶರಣಾಗುತ್ತಾರೆ. ಇದಾದ ಬಳಿಕ ಜುಲೈ 1830 ಕ್ಕೆ ಚೆನ್ನಮ್ಮಳ ಪ್ರೀತಿಯ ಸೊಸೆ ವೀರಮ್ಮ ತಾನು ಸೆರೆಮನೆಯಲ್ಲಿಯೇ ಸಾವನ್ನಪ್ಪುತ್ತಾಳೆ.

ಸರಿಸುಮಾರು ಆರು ತಿಂಗಳುಗಳ ತರುವಾಯ 1831, ಜನವರಿ 26 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಲಾಗುತ್ತದೆ.

ಹೀಗೆ ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಕೆಚ್ಚೆದೆಯಿಂದ ಹೋರಾಟ ನಡೆಸಿದ ಕನ್ನಡ ನಾಡಿನ ಹೆಮ್ಮೆಯ ಮಹಿಳೆ ರಾಣಿ ಚೆನ್ನಮ್ಮಳ ಅಗಾಧ ದೇಶಪ್ರೇಮವು ಎಲ್ಲರಿಗೂ ಮಾದರಿಯಾಗುವಂತಹುದು.ಇಂದು ಕನ್ನಡಿಗರಾದ ನಾವೆಲ್ಲರೂ ಅವಳ ಹೋರಾಟವನ್ನು ನೆನೆಯುತ್ತಾ ಅವಳಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ದೇಶದುದ್ದಗಲದ ಎಲ್ಲಾ ವಿರರ ತ್ಯಾಗ ಬಲಿದಾನಗಳನ್ನು ಸ್ಮರಿಸೋಣ.

ಜೈ ಹಿಂದ...


Sunday, 29 September 2019

ರಾಷ್ಟ್ರಪಿತರು:


ಭಾರತಕ್ಕೆ ಗಾಂಧೀಜಿ ಹೇಗೆ ರಾಷ್ಟ್ರಪಿತರೊ ಹಾಗೆ ಭೇರೆದೇಶಗಳಿಗೂ ರಾಷ್ಟ್ರಪಿತರಿದ್ದಾರೆ.ಪ್ರಮುಖ ದೇಶಗಳ ರಾಷ್ಟ್ರಪಿತರು.
§  ಎಂ.ಕೆ.ಗಾಂಧಿ: ಭಾರತ
§  ಜಾರ್ಜ್ ವಾಷಿಂಗ್ಟನ್ : ಅಮೆರಿಕಾ
§  ನೆಲ್ಸನ್ ಮಂಡೇಲಾ : ದಕ್ಷಿಣ ಆಫ್ರಿಕಾ
§  ಮಹಮ್ಮದ್ ಆಲಿ ಜಿನ್ನ : ಪಾಕಿಸ್ತಾನ
§  ಸನ್ ಯಾತ್-ಸೇನ್ : ಚೀನಾ
§  ಮುಜಿಬುರ್ ರೆಹಾಮನ್ : ಬಾಂಗ್ಲದೇಶ
§  ಡಿ. ಎಸ್.ಸೇನಾ ನಾಯಕೆ : ಶ್ರೀಲಂಕಾ
§  ರಾಜ ತ್ರಿಭುವನ್ : ನೇಪಾಳ
§  ಕೆ,ಎಂ.ಡಿ ಕೋಸ್ಪೆಡೆಸ್ : ಕ್ಯೂಬಾ
§  ಪೀಟರ್ : ರಷ್ಯಾ
§  ಇಬ್ನ್ ಸೌದ್ : ಸೌದಿ ಅರೇಬಿಯಾ
§  ಸುಲ್ತಾನ್ ಆಲ್ ನಹ್ಯಾನ್ : ಯುಎಇ
§  ಅಹ್ಮದ್ ಷಾ ದುರಾನಿ : ಆಫ್ಘಾನಿಸ್ತಾನ
§  ಡಾನ್ ಜೋಸ್ ಡೆ : ಅರ್ಜೆಂಟಿನಾ
§  ಅಂಗ್ ಸ್ಯಾನ್ : ಬರ್ಮಾ
§  ಜಾನ್ .ಮ್ಯಾಕ್ಡೊನಾಲ್ಡ್ : ಕೆನಡಾ
§  ಸೈರಸ್ ದಿ ಗ್ರೇಡ್ : ಇರಾನ್
§  ಡೇವಿಡ್ ಬೆನ್ ಗುರಿಯನ್ : ಇಸ್ರೇಲ್
§  ಡಿ ಸಾವೊ ಯಿಯಾ : ಇಟಲಿ
§  ಜೋಮೋ ಕೆನ್ಯಾಟ್ಟಾ : ಕೀನ್ಯಾ

Wednesday, 11 September 2019

ಸ್ವಾಮಿ ವಿವೇಕಾನಂದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ. [ಸೆಪ್ಟೆಂಬರ್ 11, 1893]


ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.
'ವಿಶ್ವದ ಧರ್ಮಗಳ ಸಂಸತ್ತು' ಸೆಪ್ಟೆಂಬರ್ 11, 1893 ರಂದು ವಿಶ್ವದ ಕೊಲಂಬಿಯನ್ ಪ್ರದರ್ಶನದ ಭಾಗವಾಗಿ ಈಗ ಚಿಕಾಗೋದ, "ಆರ್ಟ್ ಇನ್ಸ್ಟಿಟ್ಯೂಟ್ನ ಶಾಶ್ವತ ಸ್ಮಾರಕ ಕಲಾ ಭವನ" ದಲ್ಲಿ (ವಿಶ್ವದ ಕಾಂಗ್ರೆಸ್ ಸಹಾಯಕ ಕಟ್ಟಡ ಎಂದೂ ಗುರುತಿಸಲ್ಪಟ್ಟಿದೆ) ಪ್ರಾರಂಭವಾಯಿತು. ವಿವೇಕಾನಂದರು ಆ ದಿನ ತಮ್ಮ ಮೊದಲ ಉಪನ್ಯಾಸವನ್ನು ನೀಡಿದರು. ಇವರ ಸರದಿಯನ್ನು ತುಂಬಾ ಮುಂದೂಡುವಿಕೆಯ ನಂತರ ಮಧ್ಯಾಹ್ನದ ಹೊತ್ತಿಗೆ ಇವರ ಸರದಿ ಬಂದಿತು. ಆರಂಭದಲ್ಲಿ ಅವರು ಆತಂಕಕ್ಕೊಳಗಾಗಿದ್ದರೂ, ಅವರು ಹಿಂದೂ ವಿದ್ಯಾ ದೇವತೆಯಾದ ಸರಸ್ವತಿಗೆ ನಮಸ್ಕರಿಸಿದರು, ಮತ್ತು ಅವರು ತಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪಡೆದುಕೊಂಡಿರವುದಾಗಿ ಭಾವಿಸಿದರು; ಯಾರೋ ಅಥವಾ ಇನ್ನೊಬ್ಬರು ತಮ್ಮ ದೇಹವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅವರು ಭಾವಿಸಿದರು- (ಅದು"ದಿ ಸೋಲ್ ಆಫ್ ಇಂಡಿಯಾ, ಋಷಿಯ ಪ್ರತಿಧ್ವನಿ, ರಾಮಕೃಷ್ಣರ ಧ್ವನಿ, ಪುನರುತ್ಥಾನಗೊಂಡ ಸಮಯದ ಚೈತನ್ಯದ ಮುಖವಾಣಿ") ನಂತರ "ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ!" ಎಂದು ಸಂಬೋಧಿಸಿ ಮಾತು ಆರಂಭಿಸಿದರು. ಈ ಮಾತುಗಳಿಗೆ ಅವರು ಅಲ್ಲಿದ್ದ ಏಳು ಸಾವಿರ ಜನಸಮೂಹದಿಂದ 'ನಿಂತು ಚಪ್ಪಾಳೆಯ ಮೆಚ್ಚಗೆ ಸೂಚಿಸಿಸ ಗೌರವ' ಪಡೆದರು, ಅದು ಎರಡು ನಿಮಿಷಗಳ ಕಾಲ ನಡೆಯಿತು. ಮೌನವನ್ನು ಪುನಃಸ್ಥಾಪಿಸಿದಾಗ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. "ವಿಶ್ವದ ಅತ್ಯಂತ ಪ್ರಾಚೀನ ವೈದಿಕ ಕ್ರಮ ಅನುಸರಿಸಿದ ಸನ್ಯಾಸಿಗಳ, ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮದ ಪರವಾಗಿ ಅವರು ಯುವ ರಾಷ್ಟ್ರಗಳನ್ನು ಅಭಿನಂದಿಸಿದರು.!" (ಭಾರತಕ್ಕಿಂತ ಅವು ಕಿರಿಯ/ ಯುವ ರಾಷ್ಟ್ಟ್ರಗಳು)
ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. 'ಪೂರ್ವ ದೇಶದ ವಿಚಿತ್ರ ಧರ್ಮ' ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ 'ನ್ಯೂಯಾರ್ಕ್' ಮತ್ತು 'ಲಂಡನ್' ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು.
ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ "ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ" (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ@ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ.
'ಸ್ವಾಮಿ ವಿವೇಕಾನಂದ'ರು ದಿವಂಗತರಾದಾಗ ಕೇವಲ ೩೯ ವರ್ಷದವರಾಗಿದ್ದರು. ಯುವಕರಿಗೆ ದಾರಿ ದೀಪವಾಗಿದ್ದರು. ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-"ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ. ನನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತ್ತೇಜನ ಶುಭಾಶಯ ಆಶೀರ್ವಾದಗಳು".

Thursday, 25 July 2019

ಕಾರ್ಗಿಲ್ ವಿಜಯ ದಿವಸ 26 ಜುಲೈ.


ಕಾರ್ಗಿಲ್ ಯುದ್ಧದ ಆಪರೇಷನ್ ವಿಜಯ್ ನ ನಂತರ ಹೆಸರಿಸಲ್ಪಟ್ಟಿದೆ . ಈ ದಿನ, 26 ಜುಲೈ 1999, ಭಾರತ ಯಶಸ್ವಿಯಾಗಿ ಪಾಕಿಸ್ತಾನಿ ಒಳನುಗ್ಗುವವರನ್ನು ತಡೆಹಿಡಿದು ,ವಿಜಯ ಸಾಧಿಸಿತು. ಕಾರ್ಗಿಲ್ ಯುದ್ಧ ಜುಲೈ 26 ರಂದು ಕೊನೆಗೊಂಡಿತು. 60ಕ್ಕೂ ಹೆಚ್ಚು ದಿನಗಳಕಾಲ ನಡೆದ ಈ ಯುದ್ಧ ಎರಡೂ ಕಡೆಗಳಲ್ಲಿ( ಭಾರತ ಮತ್ತು ಪಾಕಿಸ್ತಾನ) ಭಾರಿ ಪ್ರಮಾಣದ ಸಾವುನೋವುಗಳಿಗೆ ಕಾರಣವಾಯಿತು. ಪಾಕಿಸ್ತಾನ ಅಂತರರಾಷ್ಟ್ರೀಯ ರಾಜತಾಂತ್ರಿಕ ಒತ್ತಡಡ ನಂತರ ಈ ಅಭಿಯಾನದಿಂದ ಹಿಂತೆಗೆದುಕೊಳ್ಳುವಂತಾಯಿತು .
ಕಾರ್ಗಿಲ್ ವಿಜಯ್ ದಿವಸ, ಕಾರ್ಗಿಲ್ ಸಮರದ ವೀರರ ಗೌರವಾರ್ಥ ಪ್ರತಿವರ್ಷ ಜುಲೈ 26 ರಂದು ಆಚರಿಸಲ್ಪಡುತ್ತಿದೆ . - ಕಾರ್ಗಿಲ್ ವಲಯ ಮತ್ತು ರಾಷ್ಟ್ರೀಯ ರಾಜಧಾನಿಯಾದ ದೆಹಲಿಯಲ್ಲಿ ಭಾರತದ ಪ್ರಧಾನಮಂತ್ರಿಯವರಿಂದ ಅಮರ್ ಜವಾನ್ ಜ್ಯೋತಿಗೆ ಗೌರವಾರ್ಪಣ ಮಾಡುವುದರ ಮೂಲಕ ಸಶಸ್ತ್ರ ಪಡೆಗಳ ಕೊಡುಗೆಯನ್ನು ನೆನಯಲಾಗುತ್ತದೆ.
ಇಂದು ಕಾರ್ಗಿಲ್ ಯುದ್ಧದ ವಿಜಯ ದಿವಸ. ಯುದ್ಧವಾಗಿ ಇಂದಿಗೆ 20 ವರ್ಷಗಳೇ ಕಳೆದಿವೆ.
ಟೈಗರ್ ಹಿಲ್ಸ್ ಗೆದ್ದ ಟೈಗರ್‌ಗಳಿಗೆ ನಮನ
ಕಾರ್ಗಿಲ್ ಕದನ. ಅದೊಂದು ಭಾರತದ ಇತಿಹಾಸದಲ್ಲಿ ಮರೆಯಲಾರದ ಯುದ್ಧ. ಭಾರತ-ಪಾಕಿಸ್ತಾನಗಳ ನಡುವೆ ನಡೆದ ನಾಲ್ಕನೇ ಯುದ್ಧ. ಉಭಯ ದೇಶಗಳ ನಡುವೆ ಸುಧಾರಿಸಲಾರದಷ್ಟು ಸಂಬಂಧ ಹಳಸಿದೆ ಎನ್ನುವುದಕ್ಕೆ ಈ ಯುದ್ಧಗಳು ನಿದರ್ಶನ.
ಮುಂದಿನ ಪೀಳಿಗೆ ನಮ್ಮ ಚರಿತ್ರೆಯ ಪುಟಗಳನ್ನು ತಿರುವಿ ಈ ಯುದ್ಧದ ವಿವರಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಬಹುದು. ಏಕೆಂದರೆ ಈ ಯುದ್ಧ ಅಷ್ಟು ರೋಚಕವಾಗಿತ್ತು. ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿರುವ ಕಾರ್ಗಿಲ್ ಈ ಹಿಂದೆ ಒಂದು ಜಿಲ್ಲಾಕೇಂದ್ರದ ಹೆಸರಾಗಿ ಉಳಿದಿತ್ತು. ದೇಶವಾಸಿಗಳಿಗೆ ಆ ಹೆಸರು ಅಷ್ಟೇನೂ ಪರಿಚಿತವಾಗಿರಲಿಲ್ಲ. ಆದರೆ ಈಗ ಕಾರ್ಗಿಲ್ ಎಂದ ಕೂಡಲೇ ದೇಶವಾಸಿಗಳ ನರನಾಡಿಗಳಲ್ಲಿ ಅದೇನೋ ಅವ್ಯಕ್ತ ಭಾವನೆಗಳ ಸಂಚಾರವಾಗುತ್ತದೆ. ಹಲವು ತೆರನಾದ ಭಾವನೆಗಳು ಉಕ್ಕಿ ಹರಿಯುತ್ತವೆ. ವಂಚನೆ, ಉದ್ವಿಗ್ನತೆ, ಕೋಪ, ದುಃಖ, ನಿರ್ಧಾರ, ಸಾಹಸ, ಪರಾಕ್ರಮ, ವಿಜಯ, ಸಂಭ್ರಮ – ಹೀಗೆ ಹತ್ತು ಹಲವು ಭಾವನೆಗಳು ಅನುರಣಿಸುತ್ತವೆ.
1999 ರ ಮೇ 8 ರಿಂದ ಜುಲೈ 14 ರವರೆಗೆ ನಡೆದ ಆ 74 ದಿನಗಳು, ದೇಶಾದ್ಯಂತ ಪೂರ್ತಿ ಕಾರ್ಗಿಲ್ ಯುದ್ಧದ್ದೇ ಸುದ್ದಿ. ಮಾಧ್ಯಮಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಯುದ್ಧದ ಸುದ್ದಿಗಳಿಗೇ ಆದ್ಯತೆ. ಉಳಿದೆಲ್ಲ ಕಾರ್ಯಕ್ರಮಗಳು ಮೂಲೆಗೆ. ಏನಾಯಿತು ಕಾರ್ಗಿಲ್‌ನಲ್ಲಿ ? ಇವತ್ತು ಪಾಕ್ ಶತ್ರುಗಳೆಷ್ಟು ಮಂದಿ ಸತ್ತರು ? ಭಾರತೀಯ ಸೇನೆ ಹೊಸದಾಗಿ ಯಾವ ಪ್ರದೇಶ ವಶಪಡಿಸಿಕೊಂಡಿತು ? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಜೊತೆಗೆ ಹೋರಾಟದಲ್ಲಿ ಹುತಾತ್ಮರಾದ ವೀರ ಯೋಧರ ಸುದ್ದಿ ಕೇಳಿ ಕಣ್ಣೀರು ಮಿಡಿದವರೆಷ್ಟೋ. ಯುದ್ಧ ಮುಗಿಯುವವರೆಗೆ ದೇಶ ತನ್ನೆಲ್ಲ ಮಾಮೂಲು ಸಮಸ್ಯೆಗಳನ್ನು ಬದಿಗಿಟ್ಟು ಕಾರ್ಗಿಲ್ ಕದನದ ಸುದ್ದಿಗಳಿಗಾಗಿ ಕಣ್ಣು, ಕಿವಿ ತೆರೆದು ಕುಳಿತಿದ್ದಂತೂ ನಿಜ. ಹಿಂದೆಂದೂ ಕಾಣದಂತಹ ಏಕತೆ ಈ ಯುದ್ಧದ ಸಂದರ್ಭದಲ್ಲಿ ಕಂಡುಬಂತು.
ಇದೇನು ನಾವಾಗಿ ಬಯಸಿದ ಯುದ್ಧವಲ್ಲ. ಕಾಲು ಕೆರೆದು, ಜಗಳ ತೆಗೆದು ನಾವಾಗಿ ಯುದ್ಧವನ್ನು ಮೈಮೇಲೆ ಎಳೆದುಕೊಂಡದ್ದಲ್ಲ. ನಿಜವಾಗಿ ಹೇಳುವುದಾದರೆ, ಲಾಹೋರ್‌ಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಸ್ ಯಾತ್ರೆ ಕೈಗೊಂಡ ಬಳಿಕ ಉಭಯ ದೇಶಗಳ ನಡುವೆ ಹೊಸದೊಂದು ಭಾಯಿ-ಭಾಯಿ ಶಕೆಯೇ ಆರಂಭವಾಗಬಹುದೆಂದು ಭಾವಿಸಲಾಗಿತ್ತು. ಜಂಗ್ ನ ಹೋನೇ ದೇಂಗೇ (ಯುದ್ಧ ಆಗಲು ಬಿಡುವುದಿಲ್ಲ) ಎಂದು ವಾಜಪೇಯಿ ಅವರು ಫೆಬ್ರವರಿ 21 ರಂದು ಲಾಹೋರ್‌ನಲ್ಲಿ ಪ್ರಧಾನಿ ನವಾಜ್ ಶರೀಫ್ ಭೇಟಿಯ ಬಳಿಕ ಘೋಷಿಸಿದ್ದರು. ಅದರಂತೆಯೇ ಅವರು ನಡೆದುಕೊಂಡರು.
ಆದರೆ ಆಗಿದ್ದೇ ಬೇರೆ. ಇಡೀ ಜಗತ್ತೇ ಬದಲಾವಣೆಯ ಹಾದಿ ತುಳಿಯುತ್ತಿದ್ದರೂ ಪಾಕಿಸ್ಥಾನ ಮಾತ್ರ ಭಾರತದ ವಿರುದ್ಧದ ತನ್ನ ದ್ವೇಷ ಭಾವನೆ ತೊರೆಯಲಿಲ್ಲ. ಆಕ್ರಮಣಕಾರಿ ಪ್ರವೃತ್ತಿಯನ್ನು ಅದು ಮರೆಯಲಿಲ್ಲ. ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಕುಲುಕಿದ ಅದು ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರ್‌ನಲ್ಲಿ ನವಾಜ್ ಶರೀಫ್ ವಾಜಪೇಯಿ ಅವರು ಕೈಕುಲುಕುತ್ತಿರುವಾಗ ಇತ್ತ ಕಾರ್ಗಿಲ್, ಬಟಾಲಿಕ್, ದ್ರಾಸ್, ಮುಷ್ಕೊ ಕಣಿವೆಯುದ್ಧಕ್ಕೂ ಗಡಿನಿಯಂತ್ರಣ ರೇಖೆ ಅತಿಕ್ರಮಿಸಿ ಪಾಕ್ ಸೈನಿಕರು, ಮುಜಾಹಿದ್ದೀನ್ ಬಾಡಿಗೆ ಬಂಟರು ಅಡಗುದಾಣ ರಚಿಸಿಕೊಳ್ಳತೊಡಗಿದ್ದರು. ಯುದ್ಧದ ಸಿದ್ಧತೆ ಸಾಗಿತ್ತು. ಭಾರತದ ಸ್ನೇಹಕ್ಕೆ ಪಾಕ್ ನೀಡಿದ ಬೆಲೆ ಇಂತಹದು !
ಭಾರತ ಮಾನಸಿಕವಾಗಿ ಯುದ್ಧಕ್ಕೆ ಖಂಡಿತ ಸಿದ್ಧವಾಗಿರಲಿಲ್ಲ. ಅತಿಕ್ರಮಣಕಾರಿಗಳು ಗಡಿನಿಯಂತ್ರಣ ರೇಖೆ ದಾಟಿ ನಮ್ಮ ಸೇನೆಯ ಮೇಲೆ ದಾಳಿ ನಡೆಸಿದಾಗ ಇಡೀ ದೇಶವೇ ಆಘಾತಗೊಂಡಿತು. ಅನಿರೀಕ್ಷಿತ ದಾಳಿಗೆ ನಮ್ಮ ಕೆಲವು ಸೈನಿಕರೂ ಪ್ರಾರಂಭದಲ್ಲಿ ಬಲಿಯಾದರು. ಆದರೆ ಆನಂತರ ನಡೆದದ್ದೇ ಬೇರೆ. ಮೈ ಕೊಡವಿ ಮೇಲೆದ್ದ ನಮ್ಮ ಸೈನ್ಯ ಶತ್ರುಗಳನ್ನು ಸದೆಬಡಿದು ಗಡಿಯಾಚೆ ತೊಲಗಿಸುವವರೆಗೆ ವಿಶ್ರಮಿಸಲಿಲ್ಲ. ಸೀಮಿತ ಯುದ್ಧೋಪಕರಣ, ಪ್ರತಿಕೂಲ ಹವೆ, ಪಾಕ್ ವೈರಿ ಪಡೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು – ಯಾವುದಕ್ಕೂ ನಮ್ಮ ಯೋಧರು ಹೆದರಿ ಕಂಗೆಡಲಿಲ್ಲ. ಕೊರೆಯುವ ವಿಪರೀತ ಚಳಿಯಲ್ಲಿ ಪಂಡಿತ್ ನೆಹರು ವ್ಯಂಗ್ಯವಾಗಿ ಹೇಳುತ್ತಿದ್ದ ಒಂದಿಂಚೂ ಹುಲ್ಲು ಬೆಳೆಯದ ಪ್ರದೇಶದಲ್ಲಿ ನಮ್ಮ ಯೋಧರು ಅವಿತರವಾಗಿ ಶತ್ರುಪಡೆಯ ವಿರುದ್ಧ ಸೆಣಸಿದರು. ಕೊನೆಗೂ ವಿಜಯಲಕ್ಷ್ಮಿ ಒಲಿದದ್ದು ನಮಗೇ.
ಸಾಧನಗಳ ಕೊರತೆಗಳು ನಮ್ಮ ಧೀರ ಯೋಧರನ್ನು ಕಾಡಲಿಲ್ಲ. ಧೈರ್ಯ, ಪರಾಕ್ರಮ, ದೃಢ ನಿರ್ಧಾರಗಳೇ ಅವರ ಪ್ರಬಲ ಅಸ್ತ್ರಗಳಾದವು. ಆ ಅಸ್ತ್ರಗಳ ಮುಂದೆ ಪಾಕಿಗಳ ಬೇಳೆ ಬೇಯಲಿಲ್ಲ. ಬಹುಶಃ ಜಗತ್ತಿನಲ್ಲೇ ಇದೊಂದು ಕಠಿಣತಮ ಯುದ್ಧ ಆಗಿರಬಹುದು. ದುರ್ಗಮ ಪರ್ವತದೆತ್ತರವನ್ನು ಕಷ್ಟಪಟ್ಟು ಏರಿ ಹೋರಾಡಿದ ನಮ್ಮ ಇನ್‌ಫೆಂಟ್ರಿಗೆ ವಿಶ್ರಾಂತಿಯೆಂಬುದೇ ಇರಲಿಲ್ಲ. ಕೆಲವು ಬಾರಿ ಇಡೀ ರಾತ್ರಿ ಯುದ್ಧ ಮಾಡಬೇಕಾಗಿ ಬಂದರೆ ಇನ್ನು ಕೆಲವು ಸಲ 36 ಗಂಟೆಗಳ ಕಾಲ ಶತ್ರುಪಡೆಯೊಂದಿಗೆ ಸೆಣಸಿದ ಸಂದರ್ಭಗಳೂ ಉಂಟು. ಭೂಸೈನ್ಯದ ಜೊತೆ ಆರ್ಟಿಲರಿ ಹಾಗೂ ವಾಯುದಳ ಕೂಡ ಹೋರಾಡಿತು. ಸೇನೆಯ ವೈದ್ಯಾಧಿಕಾರಿಗಳು ಅಸುರಕ್ಷಿತ ಬಂಕರ್‌ಗಳಲ್ಲಿ ಗಾಯಗೊಂಡು ಕುಸಿದುಬಿದ್ದಿದ್ದ 584 ಕ್ಕೂ ಹೆಚ್ಚು ಯೋಧರ ಶುಶ್ರೂಷೆಯಲ್ಲಿ ಹಗಲಿರುಳೂ ಶ್ರಮಿಸಿದರು. ಭಾರತ ಸೇನೆ ಇದುವರೆಗೆ ಕಂಡ ಅತ್ಯಂತ ಕಠಿಣ ಯುದ್ಧವಿದಾಗಿತ್ತು. ಈ ಯುದ್ಧದಲ್ಲಿ ಒಂದೋ ಹೋರಾಡಬೇಕಿತ್ತು, ಇಲ್ಲವೇ ಹೋರಾಡುತ್ತಾ ಮಡಿಯಬೇಕಾಗಿತ್ತು. ಬೇರೆ ಅವಕಾಶವೇ ಅವರಲ್ಲಿರಲಿಲ್ಲ. ಹಿಮ್ಮೆಟ್ಟುವ ಸಾಧ್ಯತೆಯಂತೂ ಇರಲೇ ಇಲ್ಲ. ಜುಲೈ 14 ರಂದು ವಿಜಯ್ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಾಗ ತ್ರಿವರ್ಣಧ್ವಜ ರಕ್ತದಲ್ಲಿ ಸಂಪೂರ್ಣ ತೊಯ್ದು ಕೆಂಪಾಗಿತ್ತು. ಜುಲೈ 14 ರಂದು ಅಟಲ್ ಬಿಹಾರಿ ವಾಜಪೇಯಿಯವರು ಆಪರೇಷನ್ ವಿಜಯ್ ಯಶಸ್ವಿಯಾಗಿದೆ ಎಂದು ಘೋಷಿಸಿದರು. ಆದರೆ ಕಾರ್ಗಿಲ್ ಯುದ್ಧ ಅಧಿಕೃತವಾಗಿ ಮುಕ್ತಾಯಗೊಂಡಿದ್ದು, ಭಾರತೀಯ ಸೇನೆ ಪಾಕ್ ನುಸುಳುಕೋರರನ್ನು ಸಂಪೂರ್ಣವಾಗಿ ಹೊರದಬ್ಬಲಾಗಿದೆ ಎಂದು ಘೋಷಿಸಿದ ದಿನ ಜುಲೈ 26 ರಂದು. ಆದ್ದರಿಂದ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತದೆ.
ಕಾರ್ಗಿಲ್ ಕದನ ಇಡೀ ದೇಶದ ಮಾನಸಿಕತೆಯ ಮೇಲೆ ಆಳವಾದ ಮುದ್ರೆಯೊತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಲಡಾಖ್‌ನಿಂದ ನಾಗಾಲ್ಯಾಂಡ್‌ವರೆಗೆ ದೇಶದುದ್ದಗಲಕ್ಕೆ ದೇಶಭಕ್ತಿಯ ಪ್ರವಾಹವೇ ಹರಿದಿದೆ. ಯುದ್ಧದಲ್ಲಿ ಹುತಾತ್ಮರಾದ ವೀರಯೋಧರನ್ನು ಇಡೀ ದೇಶ ಹೀರೋಗಳಂತೆ ಕಂಡು ಗೌರವ ಸಲ್ಲಿಸಿದೆ, ಆರಾಧಿಸಿದೆ. ಜಾತಿ, ಮತ, ಧರ್ಮ, ಪ್ರಾಂತ, ಭಾಷೆ ಯಾವುದೂ ಇದಕ್ಕೆ ಅಡ್ಡಿಯಾಗಲಿಲ್ಲವೆನ್ನುವುದು ವಿಶೇಷ. ದೆಹಲಿಯ ಸಮೀಪವಿರುವ ನೊಯ್ಡಾಕ್ಕೆ ಲೆಫ್ಟಿನೆಂಟ್ ವೈಜಯಂತ್ ಥಾಪರ್ ಅವರ ಪಾರ್ಥಿವ ಶರೀರ ಆಗಮಿಸಿದಾಗ, ಅವರ ಅಂತ್ಯಕ್ರಿಯೆಗಾಗಿ ಇಡೀ ಊರು ತನ್ನ ವ್ಯವಹಾರಗಳನ್ನು ಸ್ಥಗಿತಗೊಳಿಸಿತ್ತು. ದಲಿತ ಜಾತಿಗೆ ಸೇರಿದ ಸಿಪಾಯಿ ದಿನೇಶ್ ವಘೇಲಾರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ವೇಳೆ ಗುಜರಾತಿನ ಖೇಡಾ ಜಿಲ್ಲೆಯ ನಿರ್ಮಲಿ ಗ್ರಾಮದ ಎಲ್ಲ ಜಾತಿಯವರೂ ಒಟ್ಟಾಗಿ ಸೇರಿ ಆತನ ವೀರಮರಣಕ್ಕೆ ಕಣ್ಣೀರು ಹಾಕಿದರು. ಆ ಯೋಧನ ಪರಾಕ್ರಮಕ್ಕೆ ಅವರೆಲ್ಲ ಹೆಮ್ಮೆಪಟ್ಟರು. ಈ ಯುದ್ಧ ಇಡೀ ದೇಶವನ್ನೇ ಒಂದುಗೂಡಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಟೈಗರ್ ಹಿಲ್ಸ್, ತೊಲೊಲಿಂಗ್ ಹಿಮಪರ್ವತಗಳು ಸಿಖ್ಖರು, ಪಂಜಾಬಿಗಳು, ಗೂರ್ಖರು, ಬಿಹಾರಿಗಳು, ನಾಗಾಗಳು, ಬಂಗಾಲಿಗಳು, ಮಲೆಯಾಳಿಗಳು, ಮರಾಠರು, ಜಾಟರು, ಕನ್ನಡಿಗರು, ತಮಿಳರು… ಹೀಗೆ ಎಲ್ಲರ ರಕ್ತದಿಂದ ತೊಯ್ದಿದೆ. ಈ ರಕ್ತದ ಕಲೆಗಳ ಮೇಲೆ ಮತ್ತೆ ಚಳಿಗಾಲದಲ್ಲಿ ಹಿಮ ಹರಡಿಕೊಳ್ಳಲಿದೆ. ಆದರೆ ಅವರೆಲ್ಲರ ತ್ಯಾಗ, ಬಲಿದಾನಗಳು ಎಂದಿಗೂ ಅಳಿಯಲಾರವು. ಭಾರತಕ್ಕೆ ಅದೆಂತಹ ಅದಮ್ಯ ಶಕ್ತಿ ಇದೆಯೆಂದು ಚರಿತ್ರೆ ಓದಿದ ಮುಂದಿನ ಪೀಳಿಗೆಗೆ ಖಂಡಿತ ಆಶ್ಚರ್ಯಚಕಿತವಾಗದೇ ಇರದು. ಭಾರತದ ಆತ್ಮಶಕ್ತಿ ಸುಪ್ತವಾಗಿರಬಹುದು. ಆದರೆ ಸಮಯ ಬಂದಾಗ ಅದು ಜಾಗೃತವಾಗಿ ಇಡೀ ದೇಶವನ್ನು ಬಡಿದೆಬ್ಬಿಸಬಲ್ಲದೆಂಬುದಕ್ಕೆ ಕಾರ್ಗಿಲ್ ಕದನ ಒಂದು ಜ್ವಲಂತ ಸಾಕ್ಷಿ.
ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆ ಇದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು, ಅದರ ಕೆಳಗೊಂದು ವಾಕ್ಯ :
ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ : ನಿಮ್ಮ ನಾಳೆಗಳಿಗೆ ನಾವು ನಮ್ಮ ಈ ದಿನಗಳನ್ನು ತ್ಯಾಗ ಮಾಡಿದ್ದೇವೆ.
ಈ ಕೆತ್ತನೆ ಈಗ ಮಳೆಗೆ ತೊಯ್ದು ಚಳಿ, ಗಾಳಿಗೆ ತೊಯ್ದು ಮಸುಕಾಗಿದೆ. ಬರಹ ಮಸುಕಾದರೇನು ? ತಾಯ್ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ಯೋಧರ ವೀರಗಾಥೆ ಇಂದಿಗೂ ಅಕ್ಷರಶಃ ಈ ಮಾತನ್ನು ಮಾತ್ರ ನೆನಪಿಸುತ್ತಿದೆ. ಕಾರ್ಗಿಲ್ ಕದನ ಭೂಮಿಯಿಂದ ಹೆಣವಾಗಿ ಹುಟ್ಟೂರಿಗೆ ಪೆಟ್ಟಿಗೆಯಲ್ಲಿ ಬಂದ ಪ್ರತಿಯೊಬ್ಬ ಯೋಧರು ನಮ್ಮೆಲ್ಲರ ನಾಳೆಗಳಿಗಾಗಿ ತಮ್ಮ ಈ ದಿನಗಳನ್ನು ಬಲಿದಾನ ಮಾಡಿದ್ದಾರೆ.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ, ಟಿ. ವಿ. ಚಾನೆಲ್‌ಗಳಲ್ಲಿ ಜಾಹೀರಾತೊಂದು ತೇಲಿಬರುತ್ತಿತ್ತು. ‘They didn’t go down fighting for their lives in Kargil : but for ours’ ಅದರ ಹಿಂದೆಯೇ ಮತ್ತೊಂದು ವಾಕ್ಯ ತೇಲಿಬರುತ್ತಿತ್ತು. ‘They die for a stranger. And that stranger is you.’
ನಿಜ, ಕಾರ್ಗಿಲ್ ಕದನದಲ್ಲಿ ಸುಮಾರು 527 ಕ್ಕೂ ಹೆಚ್ಚು ವೀರ ಯೋಧರು ನಮಗಾಗಿ, ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಸುಮಾರು 1,363 ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಈಗಲೂ ಅನೇಕರು ದೇಶಕ್ಕಾಗಿ ಹುತಾತ್ಮರಾಗುತ್ತಲೇ ಇದ್ದಾರೆ. ಹದಿನೆಂಟು ಸಹಸ್ರ ಅಡಿಯೆತ್ತರಕ್ಕೆ ತಲುಪಿ ವೈರಿಪಡೆಯನ್ನು ಚೆಂಡಾಡುವುದು ಅಷ್ಟು ಸುಲಭವೇನಲ್ಲ. ಭಾರತೀಯ ಸೈನ್ಯ ಇದುವರೆಗೆ ಕಾದಾಡಿದ ಕದನಗಳಲ್ಲಿ ಕಾರ್ಗಿಲ್ ಸಮರ ಅತ್ಯಂತ ಕಠಿಣವಾದುದು. 1965 ಹಾಗೂ 1971 ರಲ್ಲಿದ್ದಂತೆ ಈ ಬಾರಿ ಇನ್‌ಫ್ರೆಂಟಿಯನ್ನು ಬೆಂಬಲಿಸುವ ಟ್ಯಾಂಕುಗಳಿಲ್ಲ. ಗತಪ್ರಾಣನಾಗಿ ಬಿದ್ದಾಗ ವಾಯುದಳದ ನೆರವು ಕೋರುವಂತಿರಲಿಲ್ಲ. ಯುದ್ಧರಂಗದಿಂದ ತಪ್ಪಿಸಿಕೊಂಡು ಸುರಕ್ಷಿತ ತಾಣಕ್ಕೆ ತಲುಪುವ ಪ್ರಶ್ನೆಯೇ ಈ ಬಾರಿ ಇರಲಿಲ್ಲ. ಹಾಗೆಂದೇ ಕಾರ್ಗಿಲ್ ಯುದ್ಧಕ್ಕೆ ತೆರಳಿದ ನಮ್ಮ ಸೈನಿಕರೊಬ್ಬೊಬ್ಬರದ್ದೂ ಒಂದೊಂದು ಸಾಹಸಗಾಥೆ. ಇವರಲ್ಲದೆ ರಾಷ್ಟ್ರಕ್ಕೆ ಪ್ರಾಣದೀವಿಗೆಯಾಗಿ ತಾಯ್ನಾಡಿಗಾಗಿ ತಲೆಯೊಡ್ಡಿದವರು ಇನ್ನೆಷ್ಟೋ … ಅಂತಹ ಎಲ್ಲಾ ಮಹಾನ್ ಚೇತನಗಳಿಗೆ ನಮ್ಮ ಶತಶತ ನಮನಗಳು.
ಈ ವಿಜಯ ದಿವಸದ ನೆನಪಿನೊಂದಿಗೆ ಸಮಾಜದಲ್ಲಿರುವ ಪ್ರತಿಯೊಬ್ಬ ಯುವಕರೂ ಸೈನಿಕರಂತೆ ದೇಶ, ಧರ್ಮ ರಕ್ಷಣೆಗೆ ತಮ್ಮ ಕರ್ತವ್ಯವನ್ನು ಪಾಲಿಸಿದಲ್ಲಿ ಸ್ವಸ್ಥ ಸಮಾಜದೊಂದಿಗೆ ಸುಭದ್ರ ರಾಷ್ಟ್ರ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.
ಪ್ರತಿಯೊಬ್ಬ ಯುವಕರು ನಾಡಿನ ರಕ್ಷಣೆಗೆ ಮುಂದಾಗುತ್ತಾ ಸೈನಿಕರು ಗಡಿಯಲ್ಲಿ ನಾಡ ರಕ್ಷಣೆ ಮಾಡಿದಂತೆ ಹಾಗೂ ಸೈನಿಕರು ಶತ್ರುಗಳನ್ನು ದೇಶದಿಂದ ಹೊರಗಟ್ಟಿ ಈ ವಿಜಯದಿವಸ ಆಚರಣೆ ಮಾಡಿದ ರೀತಿಯಲ್ಲಿ ನಾವೆಲ್ಲರೂ ಸೇರಿ ಸಮಾಜದ ಸೈನಿಕರಾಗಿ ಸಮಾಜದಲ್ಲಿರುವ ದುಷ್ಟಶಕ್ತಿಗಳನ್ನು ಹೊರಗಟ್ಟುವ ಸಂಕಲ್ಪ ಮಾಡೋಣ.
ಕಾಶ್ಮೀರದ ಶ್ರೀನಗರದಿಂದ ೨೦೫ಕಿ.ಮೀ.ಗಳ ದೂರದಲ್ಲಿರುವ ಕಾರ್ಗಿಲ್ ಕಠಿಣವಾದ ನೀರ್ಗಲ್ಲುಗಳಿಂದ ಆವೃತವಾದ, ಪ್ರಪಂಚದ ಕೆಲವು ಅತ್ಯಂತ ಎತ್ತರದ ಪರ್ವತಗಳಿಂದ ಕೂಡಿದ ಲಡಾಖ್ ಶ್ರೇಣಿಗೆ ಸೇರಿದ ಪ್ರದೇಶ. ಶ್ರೀನಗರ ಮತ್ತು ಲೇಹ್ ಪ್ರದೇಶಕ್ಕೆ ಇರುವ ಏಕೈಕ ಭೂಮಾರ್ಗ. ಅತ್ಯಂತ ಕ್ಲಿಷ್ಟ ಮತ್ತು ದುರ್ಗಮವಾದ ಭೂ ಸರಹದ್ದು. ವರ್ಷದ ಮುಕ್ಕಾಲು ಅವಧಿಯಲ್ಲಿ, ೦೪೮ ದೀಗ್ರಿ ಸೆಲ್ಸಿಯಸ್ ತಾಪಮಾನವಿರುವ ಶೀತಲ ಮರಭೂಮಿ. ೧೬೦ಕಿ.ಮೀ.ಗಳ ಹಿಮಚ್ಛಾದಿತ ಪರ್ವತ ಹೊಂದಿರುವ ಊಹಾತೀತ ಸ್ಥಳ.
`ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಖೂ. ಸಿಯಾಚಿನ್ ನೀರ್ಗಲ್ಲಿನ ಮೇಲೆ ಸಂಪೂರ್ಣ ಒಡೆತನ ಹೊಂದಬೇಕೆಂಬ ದುರಾಸೆಗೆ ಮತ್ತು ಅಂತಾರಾಷ್ಟ್ರೀಯ ಗಮನ ತನ್ನತ್ತ ಸೆಳೆದುಕೊಳ್ಳಲು ಪಾಕ್ ಈ ಪ್ರದೇಶಕ್ಕೆ ತನ್ನ ಸೇನೆ ನುಗ್ಗಿಸಿತ್ತು. ಈ ಆಕ್ರಮಣಕ್ಕೆ ಪಾಕಿಸ್ತಾನಕ್ಕೀ ಸೇನೆ ಕೊಟ್ಟ ಹೆಸರು `ಆಪರೇಷನ್ ಬದ್ರ್'.
ಭಾರತೀಯ ಭೂಸೇನೆ ಮತ್ತು ವಾಯುಸೇನಾ ಪಡೆಗಳು ಜಂಟಿಯಾಗಿ ಮೇ ಮತ್ತು ಜುಲೈ ೧೯೯೯ರಲ್ಲಿ ಜಯಿಸಿದ್ದು ಕಾರ್ಗಿಲ್ ಕದನ. ಈ ಕ್ರಿಯೆಗೆ ಕೊಟ್ಟ ನಾಮಧೇಯ `ಆಪರೇಶನ್ ವಿಜಯ್'. ಭಾರತೀಯ ಸೇನಾ ಇತಿಹಾಸದಲ್ಲೇ ಅತ್ಯಂತ ಮಹತ್ತರವಾದ ವಿಜಯವದು. ಸಮುದ್ರಮಟ್ಟದಿಂದ ಅತೀ ಎತ್ತರ ಪ್ರದೇಶದಲ್ಲಿ ನಡೆದ ಮೊದಲ ಯುದ್ಧವೂ ಹೌದು.
೬೦ದಿನಗಳ ಕಾಲ ರಾತ್ರಿ ಹಗಲೂ ಸತತ ಕಾದಾಟದ ನಂತರ ೫೭೨ ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಕ್ಕೆ ೧೯೯೯ರ ಜುಲೈ ೨೬ರಂದು ವಿಜಯ ಸಿಕ್ಕಿತು. ಸಿಪಾಯಿಗಳ ಗೌರವಾರ್ಥವಾಗಿ ಅಂದಿನಿಂದ ಈ ದಿನವನ್ನು ದೇಶದಾದ್ಯಂತ `ಕಾರ್ಗಿಲ್ ವಿಜಯ ದಿವಸ' ಎಂದು ಆಚರಿಸಲಾಗುತ್ತದೆ.
ಕಾರ್ಗಿಲ್ ರಣಾಂಗಣದಲ್ಲಿ ಜೀವದ ಹಂಗು ತೊರೆದು ಹೋರಾಡಿ ಮಡಿದ ಹಲವಾರು ಯೋಧರ ಜೀವನಗಾಥೆಗಳು ಸಂಕ್ಷಿಪ್ತವಾಗಿ ಬಿಂಬಿಸುವ ಪ್ರಯತ್ನ ಇಲ್ಲಿದೆ.
ಜಸ್ವಿಂದರ್ ಸಿಂಗ್ ಭರವಸೆ:
"ನೀನೆನೂ ಹೆದರಬೇಕಾಗಿಲ್ಲ. ನಾನು ಕಾಶ್ಮೀರದಲ್ಲಿ ಮೂರು ವರ್ಷಗಳ ಕಾಲ ಉಗ್ರಗಾಮಿಗಳ ವಿರುದ್ಧ ಹೋರಾಡಿರುವೆ" - ಸೈನಿಕ ಸಮವಸ್ತ್ರದ ತೋಳು ಮಡಚುತ್ತ ಕಂಬನಿದುಂಬಿದ ತನ್ನ ೨೦ರ ಹರೆಯದ ಪತ್ನಿ ಗುರುದಯಾರ್ ಕೌರ್ಗೆ ಸಿಪಾಯಿ ಜಸ್ವಿಂದರ್ ಸಿಂಗ್ ಬೆಚ್ಚನೆಯ ಭರವಸೆ ಇತ್ತ. ಆತ ಪಾಕ್ ಪಡೆಗಳನ್ನು ಬಲಿ ತೆಗೆದುಕೊಳ್ಳಲು ಕಾರ್ಗಿಲ್ ಯುದ್ಧಭೂಮಿಗೆ ಹೊರಟಿದ್ದ.
ಕೌರ್ ಜಸ್ವಿಂದರ್ಸಿಂಗ್ನನ್ನು ಮದುವೆಯಾಗಿ ಇನ್ನೂ ನಾಲ್ಕು ತಿಂಗಳು ಕಳೆದಿತ್ತಷ್ಟೆ. ಕಂಗಳ ತುಂಬಾ, ಮನದ ತುಂಬಾ ಅದೇನೇನೋ. ದಾಂಪತ್ಯ ಜೀವನದ ಹೊಂಗನಸುಗಳನ್ನು ತುಂಬಿಕೊಂಡಿದ್ದಳು. ಯುದ್ಧ ಮುಗಿದು ಪತಿ ಮನೆಗೆ ಮರಳಿದರೆ ಸಾಕು, ತಾನು ಕಟ್ಟಿಕೊಂಡ ಒಂದಿಷ್ಟು ಕನಸುಗಳಾದರೂ ನನಸಾಗಬಹುದೆಂಬ ಲೆಕ್ಕಾಚಾರ ಹಾಕಿದ್ದಳು.
ಗುರುದಯಾರ್ ಕೌರ್ ತನ್ನ ಪತಿ ಜಸ್ವಿಂದರ್ ಸಿಂಗ್ನನ್ನು ಮದುವೆಯಲ್ಲಿ ನೋಡಿದ್ದೆಷ್ಟೋ ಅಷ್ಟೆ. ಅದೇ ಆಕೆಯ ದಾಂಪತ್ಯ ಬದುಕಿನ ಅಮೃತಘಳಿಗೆಗಳು. ಅನಂತರ ಆ ಅಮೃತ ಘಳಿಗೆಗಳು ಆಕೆಯ ಬಾಳಿನಲ್ಲಿ ಮತ್ತೆಂದೂ ಬರಲಿಲ್ಲ. ಜಸ್ವಿಂದರ್ ಸಿಂಗ್ ಪ್ಲೈವು ಡ್ ಪೆಟ್ಟಿಗೆಯೊಂದರಲ್ಲಿ ಹೆಣವಾಗಿ ಮನೆಯಂಗಳಕ್ಕೆ ಬಂದಿಳಿದಾಗ ಆಕೆ ಆ ಕ್ರೂರ ಸತ್ಯವನ್ನು ಎದುರಿಸಬೇಕಾಯಿತು.
ಜಸ್ವಿಂದರ್ ಸಿಂಗ್ ತಂದೆ ಜೋಗಿಂದರ್ ಸಿಂಗ್ ಪಂಜಾಬಿನ ಒಬ್ಬ ಆಂಧ್ರ ರೈತ. ಮೂರು ಎಕರೆ ಜಮೀನು ಹೊಂದಿರುವ ಅತನಿಗೆ ಮೂವರು ಗಂಡುಮಕ್ಕಳು. ಈ ಜಮೀನು ಮೂವರ ಮಕ್ಕಳ ಬದುಕಿಗೆ ಏನೇನೂ ಸಾಲದೆಂದು ನಿರ್ಧರಿಸಿದ ಕಿರ್ಯ ಜಸ್ವಿಂದರ್ ಸಿಂಗ್ ೧೭ನೇ ವಯಸ್ಸಿನಲ್ಲೇ ಮನೆಬಿಟ್ಟು ಹೊರಟ. ಅವನನ್ನು ಬರಸೆಳೆದು ಅಪ್ಪಿಕೊಂಡಿದ್ದು ಭಾರತೀಯ ಸೇನೆ. ಆತನ ಸಾಹಸದ ಬದುಕಿಗೆ ಆಸರೆ ನೀಡಿತು.
ಮೇ ೨೧ರಂದು ಜಸ್ವಿಂದರ್ ಸಿಂಗ್ ಸಾಹಸದ ಬದುಕಿನ ಕೊನೆಯ ಅಧ್ಯಾಯ. ಆಯಕಟ್ಟಿನ ಟೈಗರ್ಹಿಲ್ಸ್ ಶತ್ರುಗಳ ವಶದಲ್ಲಿತ್ತು. ಅದನ್ನು ಹೇಗಾದರೂ ವೈರಿಗಳಿಂದ ಬಿಡಿಸಿಕೊಳ್ಳಬೇಕಾಗಿತ್ತು. ಆದರೆ ಅದೇನು ಅಷ್ಟು ಸುಲಭವೇ? ದುರ್ಗಮ ಶಿಖರ. ಕಡಿದಾದ ಹಾದಿ. ಶಿಖರದೆತ್ತರದಲ್ಲಿ ಬಂಕರ್ಗಳಲ್ಲಿ ಮದ್ದುಗುಂಡು ತುಂಬಿಕೊಂಡು ಕಾದಿರುವ ವೈರಿಪಡೆ. ವೈರಿಪಡೆಯ ಈ ದುರ್ಗಮ ಅಡಗುದಾಣ ಅರಸಿ ಹೊರಟ ಸಿಪಾಯಿ ಜಸ್ವಿಂದರ್ ಸಿಂಗ್ ಕೊನೆಗೂ ಮೇಲಕ್ಕೆ ತಲುಪಿದ. ಟೈಗರ್ ಶಿಖರವೇರಿದ. ಅಷ್ಟರಲ್ಲಿ ಆತನ ಎರಡೂ ತೊಡೆಗಳಿಗೆ ಎಲ್ಲಿಂದಲೋ ಗುಂಡುಗಳು ಬಂದು ಬಡಿದವು. ತೊಡೆಗಳು ಛಿದ್ರಛಿದ್ರ. ಆದರೆ ಮನಸ್ಸು ಮಾತ್ರ ಇನ್ನೂ ಭದ್ರ. ಕೊನೆಯುಸಿರಿನವರೆಗೂ ಕೈಯಲ್ಲಿದ್ದ ಬಂದೂಕು ವೈರಿಪಡೆಯ ಮೇಲೆ ಬೆಂಕಿ ಕಾರುತ್ತಲೇ ಇತ್ತು.
ಗುರುದಯಾಲ್ ಕೌರ್ ಮನೆಯಲ್ಲಿ ಟಿವಿ ಮುಂದೆ ಕುಳಿತಿದ್ದಳು. ಕಾರ್ಗಿಲ್ ಕದನದ ಸುದ್ದಿಗಳನ್ನು ಕಾತರದಿಂದ ಆಲಿಸುತ್ತಿದ್ದಳು. ತನ್ನ ಪತಿ ಸಿಪಾಯಿ ಜಸ್ವಿಂದರ್ ಸಿಂಗ್ ಬಗ್ಗೆ ಏನಾದರೂ ಸುದ್ಧಿ, ಚಿತ್ರ ಬರುವದೋ ಎಂದು ಕಾಯುತ್ತಿದ್ದಳು. ಅವಳ ನಿರೀಕ್ಷೆ ಸುಳ್ಳಾಗಲಿಲ್ಲ. ಒಂದೆರಡು ದಿನದಲ್ಲೇ ಜಸ್ವಿಂದರ್ ಸಿಂಗ್ಮನೆಯಂಗಳಕ್ಕೆ ಬಂದಿಳಿದ. ಆದರೆ ಶವವಾಗಿ ಪೆಟ್ಟಿಗೆಯೊಂದರಲ್ಲಿ ಮಲಗಿ. ಪಂಜಾಬಿನ ಧೂಳುತುಂಬಿದ ಹಳ್ಳಿ ಮುನ್ನೆಯ ಆ ಸಣ್ಣ ಮನೆಯಂಗಳದಲ್ಲಿ ಕುಳಿತು ಆಗಸದತ್ತ ದೃಷ್ತಿ ನೆಟ್ಟಿರುವ ಕೌರ್ ಈಗ ಮ್ಲಾನವದನೆ.
ಜಸ್ವಿಂದರ್ ಸಿಂಗ್ ವೀರಮರಣ ಅಪ್ಪಿದ್ದಕ್ಕೆ ತಂದೆಗೆ ದುಃಖವಿಲ್ಲ. "ಶತ್ರುವಪಡೆಯನ್ನು ಹಿಮ್ಮೆಟ್ಟಿಸಲು ಯಾರಾದರೂ ಹೋರಾಡುತ್ತಾ ಸಾಯಲೇಬೇಕು." ಎಂದು ತಮ್ಮಷ್ಟಕ್ಕೆ ಹೇಳಿಕೊಳ್ಳುತ್ತಾರೇ.
"ನಮ್ಮ ಬದುಕಿಗೆ ಇದೊಂದು ಬರಸಿಡಿಲಿನಂತೆ ಬಂದಪ್ಪಳಿಸಿದ ದುರಂತ. ಆದರಿದು ದೇಶಕ್ಕೆ ಉತ್ತಮ ಭವಿಷ್ಯ ತಂದುಕೊಡಬಹುದೇನೋ. ಅದೇ ನಮಗೆ ಈಗುಳಿದಿರುವ ಸಮಾಧಾನ." - ದಾಂಪತ್ಯದ ಸವಿಯನ್ನೇ ಉಣ್ಣದ ಕೌರ್ ಉಮ್ಮಳಿಸಿ ಬರುವ ದುಃಖವನ್ನು ತಡೆದೊತ್ತಿ ಹೇಳುತ್ತಾಳೆ.
ಹೌದು, ಜಸ್ವಿಂದರ್ ಸಿಂಗ್ನ ಸಾವು ವ್ಯರ್ಥವಾಗುವದಿಲ್ಲ.
ಕಾರ್ಗಿಲ್ ಕದನ : ಕೆಲವು ವಿವರಗಳು
ಕಾಲಮಿತಿ :
ಯುದ್ಧ ನಡೆದ ಒಟ್ಟು ಅವಧಿ : ೭೪ ದಿನಗಳು
ಯುದ್ಧಕ್ಷೇತ್ರದ ಒಟ್ಟು ಅವಧಿ : ೧೫೦ ಕಿ.ಮೀ.
ಬಳಸಿದ ಬಲಾಬಲ
ಭಾರತೀಯ ಸೇನೆ : ೨೦,೦೦೦
ಪಾಕಿಸ್ತಾನಿ ಸೇನೆ : ಅಘೋಷಿತ
ಅತಿಕ್ರಮಣಕಾರಿಗಳು : ೧೫೦೦
ಶಸ್ತ್ರಾಸ್ತ್ರ ಬಳಕೆ
ಆರ್ಟಿಲರಿ : ೩೦೦ (೧೦೦ ಬೊಫೋರ್ಸ್ ಬಂದೂಕುಗಳೂ ಸೇರಿದಂತೆ)
ಶೆಲ್‍ಗಳು (ಪ್ರತಿನಿತ್ಯ) : ೫,೦೦೦
ಟೋನೇಜ್ (ಪ್ರತಿನಿತ್ಯ) : ೧೫,೦೦೦
ವಾಯುಬಲ
ಸ್ಟ್ರೈಕ್ ಮಿಶನ್ಸ್ : ೫೫೦
ರೆಕನೈಸಾನ್ಸ್ : ೧೫೦
ಎಸ್ಕಾರ್ಟ್ ಮಿಶನ್ : ೫೦೦
ಚಾಪರ್ ಸಾರ್ಟೀಸ್ : ೨,೧೮೫
ಮಡಿದವರು
ಭಾರತಸೇನೆ : ೪೦೭
ಗಾಯಗೊಂಡವರು : ೫೮೪
ನಾಪತ್ತೆಯಾದವರು : ೬
ಪಾಕ್ ಸೇನೆ ಮಡಿದವರು : ೬೯೬
ಯುದ್ಧ ವೆಚ್ಚ
ದೈನಂದಿನ ಸರಾಸರಿ ವೆಚ್ಚ : ೧೫ ಕೋಟಿ ರೂ.
ಒಟ್ಟು ವೆಚ್ಚ : ೧,೧೦೦ ಕೋಟಿ ರೂ.
ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಕನ್ನಡದ ಕೆಲವರು ಕಡುಗಲಿಗಳು
*ಭಾರತೀಯ ವಾಯುಪಡೆಯ ಪ್ಲೈಟ್ ಲೆಫ್ಟಿನೆಂಟ್ ಎಂ.ಸುಬ್ರಹ್ಮಣ್ಯಂ (ಬೆಳಗಾವಿ)
* ಮಡಿವಾಳಪ್ಪ ನಾಯ್ಕರ್ (ಆಸುಂಡಿ ಗ್ರಾಮ, ಸವದತ್ತಿ ತಾಲೂಕು, ಬೆಳಗಾವಿ)
* ಸಿಪಾಯಿ ಧೋಂಡಿಬಾ ದೇಸಾಯಿ (ವಡಗಾಂವ, ಖಾನಾಪುರ, ತಾಲೂಕು, ಬೆಳಗಾವಿ)
ಸಿದ್ಧನಗೌಡ ಬಸನಗೌಡ ಪಾಟೀಲ, ಸಿ.ಆರ್.ಪಿ.ಎಫ್. (ಕೆರೂರು ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ)
* ಅಪ್ಪಾಸಾಹೇಬ ಪೀರಪ್ಪ ಧನವಾಡೆ, ಸಿ.ಆರ್.ಪಿ.ಎಫ್. (ಇಂಗಳಿ ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ)
* ನಾಯಕ ಶಿವಬಸಯ್ಯ ಕುಲಕರ್ಣಿ, ೨೦ನೆಯ ರಾಷ್ಟ್ರೀಯ ರೈಫಲ್ಸ್ (ಚೊಳಚಗುಡ್ಡ ಗ್ರಾಮ, ಬಾದಾಮಿ, ಬಾಗಲಕೋಟ ಜಿಲ್ಲೆ)
* ಸಿದ್ಧರಾಮಪ್ಪ (ರೇಕುಳಿ ಗ್ರಾಮ, ಬೀದರ್ ಜಿಲ್ಲೆ)
* ಲ್ಯಾನ್ಸ್ ಹವಿಲ್ದಾರ್ ಮಲ್ಲಯ್ಯ ಚನ್ನಬಸಯ್ಯ ಮೇಗಳಮಠ (ಅಳವಂಡಿ ಗ್ರಾಮ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ)
* ಎಸ್.ಕೆ.ಮೇದಪ್ಪ, ಮರಾಠಾ ಲೈಟ್ ಇನ್‍ಫೆಂಟ್ರಿ (ಕಿರಂಗನದೂರು, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ)
* ದಾವಲಸಾಬ್ ಅಲಿಸಾಬ್ ಕಂಬಾರ್, ಬಿ.ಎಸ್.ಎಫ್. (ಬಲವಟ್ ಗ್ರಾಮ, ಮುದ್ದೇಬಿಹಾಳ ತಾಲೂಕು, ಬಿಜಾಪುರ)
* ಸುಬೇದಾರ್ ಪೆಮ್ಮಂಡ ದೇವಯ್ಯ ಕಾವೇರಪ್ಪ (ವಿರಾಜಪೇಟೆ, ಕೊಡಗು ಜಿಲ್ಲೆ)
* ಲಾನ್ಸ್ ನಾಯಕ್ ಎಚ್.ವಿ.ವೆಂಕಟ್ (ಅಗ್ರಹಾರ ಗ್ರಾಮ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ)
* ಲಾನ್ಸ್ ನಾಯಕ್ ಯಶವಂತ ಕೋಲಕಾರ (ಮೇಕಲಮರಡಿ ಗ್ರಾಮ, ಬೈಲಹೊಂಗಲ ತಾಲೂಕು, ಬೆಳಗಾವಿ ಜಿಲ್ಲೆ)
* ದಿಲೀಪ ಪೀರಪ್ಪ ಪೋತ್ರಾಜ (ಗದ್ಯಾಳ ಗ್ರಾಮ, ಜಮಖಂಡಿ ತಾಲೂಕು, ಬಿಜಾಪುರ ಜಿಲ್ಲೆ)
* ಗೋವಿಂದ ಶೆಡೋಳೆ (ವರದಟ್ಟಿ ಗ್ರಾಮ, ಭಾಲ್ಕಿ ತಾಲೂಕು, ಬೀದರ ಜಿಲ್ಲೆ)
ಯುವರಾಜ ನಂದಿ.


Tuesday, 16 July 2019

ಗುರು ಪೂರ್ಣಿಮಾ

ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ.

ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಗುರು ಅನ್ನುವ ಶಬ್ದ ಗು ಮತ್ತು ರು ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ. ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.

ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.

ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ. ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ. ಹಲವಾರು ಹಿಂದೂಗಳು, ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ. ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತಾದಿಗಳಿಗೆ ಪ್ರವಚನಗಳನ್ನು ನೀಡುತ್ತಾರೆ. ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅದರ ವಿದ್ಯಾರ್ಥಿಗಳು ಈ ಹಬ್ಬವನ್ನು ಆಚರಿಸುತ್ತಾರೆ.

ಹಿಂದೂ ಪುರಾಣ
ಇದೇ ದಿನ ಮಹಾಭಾರತದ ಕರ್ತೃರಾದ ವೇದವ್ಯಾಸರು, ಪರಾಶರ ಋಷಿಗಳು ಹಾಗೂ ಒಬ್ಬ ಮೀನುಗಾರನ ಮಗಳಾದ ಸತ್ಯವತಿಗೆ ಜನ್ಮಿಸಿದರು. ವೇದವ್ಯಾಸರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿ ಅವುಗಳ ಬಳಕೆಯೆ ಆಧಾರದ ಮೇಲೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಸುಮಂತು, ವೈಶಂಪಾಯನ, ಜೈಮಿನಿ ಹಾಗೂ ಪೈಲರಿಗೆ ಬೋಧಿಸುವ ಮೂಲಕ ವೈದಿಕ ಅಧ್ಯಯನಗಳ ಉದ್ದೇಶಕ್ಕಾಗಿ ಮಹತ್ತರವಾದ ಸೇವೆಮಾಡಿದರು. ಈ ವಿಭಜನೆ ಮತ್ತು ಸಂಪಾದನೆಯನ್ನು ಮಾಡಿದ್ದಕ್ಕಾಗಿ ಅವರಿಗೆ ವ್ಯಾಸ (ವ್ಯಾಸ = ಸಂಪಾದಿಸು, ವಿಭಾಗಿಸು) ಎಂಬ ಗೌರವ ನಾಮ ದೊರೆಯಿತು.

ಯುವರಾಜ ನಂದಿ



Tuesday, 11 June 2019

ಜ್ಞಾನೋದಯ

ಜ್ಞಾನೋದಯ ಆಗುವುದು ಅಂದರೇನು? ಜ್ಞಾನೋದಯ ಯಾಕೆ ಆಗಬೇಕು? ಜ್ಞಾನೋದಯ ಆದ ತಕ್ಪಣ ಏನೇನು ಬದಲಾವಣೆ ಆಗುತ್ತದೆ?

Tuesday, 28 May 2019

ವಿಶ್ವಾಸ ದೇವರಂತೆ ಬದುಕಿಗಿಂತ ಬಲು ದೊಡ್ಡದು.

ಒಮ್ಮೆ ಶ್ರೀಕೃಷ್ಣ ಪಾಂಡವರನ್ನು ನೋಡಲು ಬಂದಿದ್ದ...
ಪಾಂಡವರು ವನವಾಸದಲ್ಲಿದ್ದರು.
ಮಧ್ಯಾಹ್ನ ಭೋಜನದ ಸಮಯವಾದರೂ
ಧರ್ಮರಾಜ ಕುಟೀರಕ್ಕೆ ಬಂದಿರಲಿಲ್ಲ. ಎಲ್ಲಿ
ಹುಡುಕಿದರೂ ಧರ್ಮರಾಜ ಸಿಗಲಿಲ್ಲ. ಯಾರೋ ಹೇಳಿದರು..
"ಇಲ್ಲೇ ಪಕ್ಕದಲ್ಲಿ
ಒಂದು ಅಜ್ಜಿಯ ಗುಡಿಸಲು ಇದೆ. ಅಲ್ಲಿ ಧರ್ಮರಾಜ ಇದ್ದಾನೆ..."
ಪಾಂಡವರು
ಶ್ರೀಕೃಷ್ಣನ ಜೊತೆಗೂಡಿ ಅಜ್ಜಿಯ ಗುಡಿಸಲಿಗೆ ಬಂದರು... ಎಲ್ಲರಿಗೂ ಆಶ್ಚರ್ಯ.. ! ಧರ್ಮರಾಜ
ಅಜ್ಜಿಗಾಗಿ ಕಟ್ಟಿಗೆ ಹೊರೆಯನ್ನು ಹೊತ್ತುಕೊಂಡು ಬಂದು
ಗುಡಿಸಲ ಪಕ್ಕದಲ್ಲಿ ಸಂಗ್ರಹಿಸಿಡುತ್ತಿದ್ದಾನೆ !
ಕೃಷ್ಣ ಕುತೂಹಲದಿಂದ ಕೇಳಿದ..
"ಧರ್ಮಜಾ...
ಇದೇನಿದು ಕಟ್ಟಿಗೆ ಹೊರೆಯನ್ನು ಹೊರುತ್ತಿದ್ದೀಯಾ ?..."
ಧರ್ಮರಾಜ
ಬೆವರು ಒರೆಸಿಕೊಳ್ಳುತ್ತ ಹೇಳಿದ...
"ಮಾಧವಾ..
ಈ ಅಜ್ಜಿ ಇಲ್ಲಿ ಒಬ್ಬಳೇ ಇರುತ್ತಾಳೆ. ಇಂದು
ಬೆಳಿಗ್ಗೆ ಕಟ್ಟಿಗೆ ಹೊರೆಯನ್ನು ತನ್ನ ತಲೆಯ ಮೇಲೆ
ಇಟ್ಟುಕೊಳ್ಳಲಾಗದೆ ಕಷ್ಟಪಡುತ್ತಿದ್ದಳು. ನನಗೆ ನೋಡಲಾಗಲಿಲ್ಲ.ಸಹಾಯ ಮಾಡುತ್ತಿದ್ದೇನೆ..."
ಕೃಷ್ಣ ಮತ್ತೆ ಕೇಳಿದ."ಧರ್ಮಜಾ...
ಕಟ್ಟಿಗೆ ಹೊರೆಯನ್ನು
ಅಜ್ಜಿಯ ತಲೆಯ ಮೇಲೆ ಇಟ್ಟಿದರೆ ನಿನ್ನ ಕರ್ತವ್ಯ ಮುಗಿಯುತ್ತಿತ್ತು. ಅಥವಾ ಆ ಹೊರೆಯನ್ನು ಅವಳ ಗುಡಿಸಲಿಗೆ ತಂದುಕೊಟ್ಟರೆ ಸಾಕಾಗಿತ್ತು.ದಿನಾಪೂರ್ತಿ ಕಟ್ಟಿಗೆ ಹೊರೆಯನ್ನು ಹೊರುವ ಅಗತ್ಯವೇನಿತ್ತು ಧರ್ಮಜಾ ?.."..
ಧರ್ಮರಾಜ
ಮತ್ತೊಮ್ಮೆ ಬೆವರನ್ನು ಒರೆಸಿಕೊಂಡ..
"ಕೃಷ್ಣಾ...
ಲೋಕನೀತಿಯಲ್ಲಿ ನೀನು ಹೇಳುತ್ತಿರುವದು ಸರಿ. ವಿಷಯ ಅದಲ್ಲ...ಇಲ್ಲಿ ಅಜ್ಜಿಗೆ
ಸಹಾಯ ಮಾಡುವದರ ಹಿಂದೆ ನನ್ನ ಸ್ವಾರ್ಥವೂ ಇದೆ..." ...
ಪಾಂಡವರಿಗೆಲ್ಲ ಆಶ್ಚರ್ಯವಾಯಿತು...
"ಮಾಧವಾ, ಯಾರಾದರೂ
ಇಂಥಹ
ವಯಸ್ಸಾದವರಿಗೆ
ಸಹಾಯದ ಅವಶ್ಯಕತೆ ನಮಗೆ ಕಾಣಿಸಿದಲ್ಲಿ ಸಹಾಯ ಮಾಡಿಬಿಡಬೇಕು. ನಮ್ಮಿಂದ
ದೂರದಲ್ಲಿರುವ
ನಮ್ಮ ಹೆತ್ತವರಿಗೆ ಅಗತ್ಯವಿರುವಾಗ
ನನ್ನಂತೆ
ಅಲ್ಲೂ ಸಹ ಯಾರಾದರೂ ಸಹಾಯ ಮಾಡಲು ಬರುತ್ತಾರೆ... ಇದು
ನನ್ನ ನಂಬಿಕೆ... ಅದಮ್ಯ ವಿಶ್ವಾಸ....! ನನ್ನ
ತಾಯಿ ಕುಂತಿದೇವಿ ದೂರದ ಹಸ್ತಿನಾವತಿಪುರದಲ್ಲಿದ್ದಾಳೆ.
ಹೆತ್ತವಳಿಗಂತೂ ಸಹಾಯ ಮಾಡಲಾಗುವದಿಲ್ಲ... ಈ ಅಜ್ಜಿಗೆ
ಸಹಾಯ ಮಾಡುವದರಲ್ಲಿ
ನನ್ನ ಸ್ವಾರ್ಥವಿದೆ ಕೃಷ್ಣಾ...ವೃದ್ಯಾಪ್ಯದ
ಅಸಹಾಯಕದಲ್ಲಿರುವ
ನನ್ನಮ್ಮನಿಗೆ ನನ್ನ ಅಗತ್ಯ ಎಷ್ಟಿದೆಯೋ ಗೊತಿಲ್ಲ....
ಈ ಅಜ್ಜಿಯಲ್ಲಿ
ನನ್ನಮ್ಮನನ್ನು ಕಾಣುತ್ತಿದ್ದೆನೆ ಕೃಷ್ಣಾ...." ....
ಶ್ರೀಕೃಷ್ಣ ಮೂಕನಾಗಿದ್ದ...
ಉಳಿದ
ಪಾಂಡವರ ಕಣ್ಣಲ್ಲಿ ನೀರು ಜಿನುಗಿತ್ತು...
ಶ್ರೀಕೃಷ್ಣ
ಧರ್ಮರಾಜನನ್ನು
ಪ್ರೀತಿಯಿಂದ ಆಲಂಗಿಸಿಕೊಂಡ...
ಬದುಕು...ನೌಕರಿ...ಹೋರಾಟ..ಮಕ್ಕಳು.. ಸಂಸಾರ..
ವ್ಯವಹಾರಗಳ ಜಂಜಡದಲ್ಲಿ
ನಮ್ಮ ಹೆತ್ತವರ ಜೊತೆಯಾಗಿ ಇರಲು ಸಾಧ್ಯವಾಗುವದಿಲ್ಲ...
ನಮ್ಮ
ಅಕ್ಕಪಕ್ಕದಲ್ಲಿ..
ರಸ್ತೆಯಲ್ಲಿ ಹೋಗುವಾಗ ...
ಯಾರಾದರೂ
ವೃದ್ಧರು ...
ಅಸಹಾಯಕರು ಕಂಡಲ್ಲಿ..
ಅವರಿಗೆ ಸಹಾಯದ ಅವಶ್ಯಕತೆ ಇದ್ದಲ್ಲಿ
ಖಂಡಿತ ಹೋಗಿ ಮಾಡಬೇಕು...
ಅಗತ್ಯವಿರುವವರಿಗೆ
ಸಹಾಯ ಮಾಡುವದು ಪುಣ್ಯದ ಕೆಲಸ..
ಸಹಾಯ ಮಾಡುವ ಸಂದರ್ಭ ಎಲ್ಲರಿಗೂ ಸಿಗುವದಿಲ್ಲ...
ಭಾಗ್ಯವಂತರಿಗೆ ಮಾತ್ರ ಸಹಾಯ ಮಾಡುವ ಸಂದರ್ಭ ಸಿಗುತ್ತದೆ..
ಹೆತ್ತವರನ್ನು
ನೆನಪಿಸಿಕೊಂಡು ಅಂಥವರಿಗೆ ಸಹಾಯ ಮಾಡಬೇಕು...
ದೂರದಲ್ಲಿರುವ
ನಮ್ಮ ಹೆತ್ತವರಿಗೆ ಯಾರೋ ಪುಣ್ಯಾತ್ಮರು ಸಹಾಯ ಮಾಡಿರುತ್ತಾರೆ...
ನಂಬಿಕೆ
ವಿಶ್ವಾಸ ದೇವರಂತೆ ಬದುಕಿಗಿಂತ ಬಲು ದೊಡ್ಡದು...

ಯುವರಾಜ ನಂದಿ