ಸಣ್ಣ ಸಣ್ಣ ಸಾಮ್ರಾಜ್ಯ ಕಟ್ಟಿರೋರೆಲ್ಲ ಸಾಮ್ರಾಟರಾದ್ರೆ ಆ ಎಲ್ಲ ಸಾಮ್ರಾಟರಿಗೆ ಅಪ್ಪ ಕಣ್ರೋ ನಮ್ಮ ಇಮ್ಮಡಿ ಪುಲಿಕೇಶಿ.
ಆರನೇ ಶತಮಾನದಲ್ಲಿ ದಕ್ಷಿಣದಲ್ಲಿ ಪುಲಿಕೇಶಿಯು ಸಮರ್ಥ ರಾಜನಾಗಿರುತ್ತಾನೆ ಹಾಗೆಯೇ ಅವನ ಕಾಲಕ್ಕೆ ಉತ್ತರ ಭಾರತದ ಪ್ರಬಲ ದೊರೆಯಾಗಿದ್ದವನು ವರ್ಧನ ವಂಶದ ಹರ್ಷವರ್ಧನ. ಇಬ್ಬರು ರಾಜರುಗಳ ಸಾಮ್ರಾಜ್ಯಗಳ ಗಡಿ ನರ್ಮದ ನದಿ. ನರ್ಮದ ನದಿಯ ಮೇಲಿನ ಪ್ರದೇಶ ಹರ್ಷವರ್ಧನನ ಸಾಮ್ರಾಜ್ಯದ ಭಾಗವಾಗಿದ್ದಾರೆ, ನರ್ಮದ ನದಿಯ ಕೆಳಗಿನ ಪ್ರದೇಶ ಪುಲಿಕೇಶಿ ರಾಜನ ಸಾಮ್ರಾಜ್ಯದ ಭಾಗವಾಗಿರುತ್ತದೆ. ಒಮ್ಮೆ ದಕ್ಷಿಣದಲ್ಲಿ ದಿಗ್ವಿಜಯ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಹರ್ಷ ಮಹಾರಾಜ ತನ್ನ ಸೈನ್ಯ ಸಮೇತ ಪುಲಿಕೇಶಿ ಸಾಮ್ರಾಜ್ಯದ ಮೇಲೆ ದಾಳಿ ಮಾಡುತ್ತಾನೆ. ೬೧೮-೬೧೯ರಲ್ಲಿ, ನರ್ಮದ ನದಿಯ ತಟದಲ್ಲಿ ನಡೆದ ಈ ಕದನದಲ್ಲಿ ಹರ್ಷವರ್ಧನನ ಸೈನ್ಯ ಪುಲಿಕೇಶಿಯ ಸೈನ್ಯದ ಮುಂದೆ ಸೋತು ಸುಣ್ಣವಾಗುತ್ತದೆ. ಸುಮಾರು ಅರವತ್ತು ಸಾವಿರ ಆನೆಗಳಿಂದ ಕೂಡಿದ ಪುಲಿಕೇಶಿಯ ಗಜಪಡೆ ಹಾಗೂ ಸೈನ್ಯವನ್ನ ಆ ಕಾಲಕ್ಕೆ ಯಾರಿಂದಲೂ ಸೋಲಿಸಲು ಅಸಾಧ್ಯವಾದ ಕಾರಣ ಆತನ ಸೈನ್ಯವನ್ನ "ಕರ್ಣಾಟ ಬಲಂ ಅಜೇಯಂ" ಎಂದು ವರ್ಣಿಸಲ್ಪಟ್ಟಿದೆ. ಯುದ್ಧದಲ್ಲಿ ಜಯಿಸಿದ ಪುಲಿಕೇಶಿ ಮಹರಾಜ ಪರಮೇಶ್ವರ ಎಂಬ ಬಿರುದನ್ನೂ ಪಡೆಯುತ್ತಾನೆ.