Tuesday, 16 November 2021

ನನ್ನ ಈ ಜನ್ಮ ನಿನಗೆ ಸದಾ ಋಣಿ ಅಮ್ಮ

ನನ್ನ ಈ ಜನ್ಮ ನಿನಗೆ ಸದಾ ಋಣಿ ಅಮ್ಮ
ಮರುಜನ್ಮ ನೀ ಹುಟ್ಟಿ ಬಾ ನನ್ನ ಮಗಳಾಗಿ ಅಮ್ಮ
ಮುದ್ದಿಸುವೆ ನಿನ್ನಂತೆ ಲಾಲಿಸುವೆ ಮಗುವಂತೆ
ಕೈ ತುತ್ತು ನೀಡಿ ಲಾಲಿ ಹಾಡಿ ಮಡಿಲಲ್ಲಿ ಮಲಗಿಸುವೆ
ಕೊರಗಬೇಡ ಮರುಗಬೇಡ
ನಾನಿರುವವರೆಗು ಹೆದರಬೇಡ.

ನಿನ್ನಂತೆ ಬದುಕಿದವರ ಕಂಡಿಲ್ಲ ನಾನು
ನಿನ್ನ ಜೀವನವೆ ಮಹೋನ್ನತ ಇತಿಹಾಸ ಇನ್ನು
ನೀನಾದೆ ಪತಿ ಮಕ್ಕಳಿಗೆ ದಾರಿ ದೀಪ
ನಿನ್ನ ಕನಸು ಬಯಕೆಗಳ ಮುಚ್ಚಿಟ್ಟು ಪಾಪ
ಹೆದರಿ ಕುಂತು ಬದುಕಿಗೆ ಹಿಂಜರಿಯುವಾಗ
ಗದರಿ ನಿಲ್ಲುವಂತೆ ಬೆನ್ತಟ್ಟಿ ನೆರಳಾದೆ ಈಗ
ನಿನ್ನ ಹಾಗೆ ಕರುಣೆ ದೇವರಿಗು ಇಲ್ಲ
ನಿನಗಾಗಿ ನಾ ಇರುವೆ ಕೊರಗಬೇಡ ಅಮ್ಮ.

ಈ ಜನ್ಮ ಅಂತು ಮರೆತುಬಿಡು ನೀನು
ಬರುವ ಜನ್ಮವಂತು ನಿಂಗೆ ಅಪ್ಪ ನಾನು
ಬೆತ್ತ ಹಿಡಿದು ಗದರಲಾರೆ, ಅತ್ತ-ಇತ್ತ ಹೋಗಲಾರೆ
ಒಂದು ಕಂಬನಿಯ ತರಿಸಲಾರೆ ಕೇಳಿದ್ದೇನು ಇಲ್ಲ ಎನ್ನಲಾರೆ
ಸುತ್ತಲಿನ ಜನರೆಲ್ಲ ನಿನ್ನ ಕೊಂಡು ಮುದ್ದಾಡಬೇಕು
ಅಮ್ಮ-ಅಪ್ಪ ನಾನಾಗಿ, ಅಕ್ಕ-ತಮ್ಮ ನಾನಾಗಿ
ಬಂಧು-ಬಳಗ ನಾನಾಗಿ ಎಂದೂ ಜೊತೆಯಿರುವೆ
ಮರುಗದಿರು ಮತ್ತೆ ನೋವ ಪಡದಿರು
ನಾನಿರುವೆ ಇನ್ನೆಂದು ಜಾಸ್ತಿ ನಗುತಲಿರು ಅಮ್ಮ.

ಪಾರ್ವತಿ ಪುತ್ರ ಯಲ್ಲಪ್ಪ ನಂದಿ.